ಆಧುನಿಕತೆಯಿಂದ ನಶಿಸುತ್ತಿದೆ ನಾಟಕ: ಅನ್ನದಾನೀಶ್ವರ ಶ್ರೀ
ಮುಂಡರಗಿ: ಆಧುನಿಕತೆ ಆರ್ಭಟಕ್ಕೆ ಸಿಲುಕಿ ಗ್ರಾಮೀಣ ಜನತೆಯ ದೇಸಿ ಕಲೆ, ಸಂಸ್ಕೃತಿ, ಆಚರಣೆಯ ಪ್ರತಿಬಿಂಬವಾಗಿರುವ ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳು ನಶಿಸುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದು ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಹೇಳಿದರು.
ಸ್ಥಳೀಯ ಜ. ಅನ್ನದಾನೀಶ್ವರ ಮಠದ ಆವರಣದಲ್ಲಿ ಭಾನುವಾರ ರಾತ್ರಿ ಹಗರಿಬೊಮ್ಮನಹಳ್ಳಿಯ ಕಲಾವೃಂದದ ಆಶ್ರಯದಲ್ಲಿ ಏರ್ಪಡಿಸಿದ್ದ 'ಸುರಪುರದ ಸಿಂಹ ರಾಜಾ ವೆಂಕಟಪ್ಪ ನಾಯಕ' ನಾಟಕ ಪ್ರದರ್ಶನ ಉದ್ಘಾಟಸಿ ಅವರು ಮಾತನಾಡಿದರು.
ನಾಡಿನ ಗತವೈಭವ, ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನ ಸಂದೇಶ ನೀಡುವ ಪ್ರಬಲ ಮಾಧ್ಯಮವಾಗಿರುವ ನಾಟಕ ಕ್ಷೇತ್ರ ಅವನತಿ ಅಂಚಿಗೆ ಸಾಗುತ್ತಿರುವುದು ವಿಷಾದನೀಯ ಸಂಗತಿ. ಟಿವಿ, ಕಂಪ್ಯೂಟರ್ ಮಧ್ಯದಲ್ಲಿ ನೈಜ ಕಥೆ ಹೇಳುವಂತ, ಇದ್ದದ್ದನ್ನು ಇದ್ದ ಹಾಗೇ ತೋರಿಸುವ ನಾಟಕ ಕಲೆ ಇಂದು ಗ್ರಾಮೀಣ ಭಾಗದಲ್ಲೂ ಹುಡುಕಿಕೊಂಡು ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ದೇಸಿಯ ಕಲೆಯಾದ ನಾಟಕ ಜೀವಂತವಾಗಿರಬೇಕಾದರೆ ಅದಕ್ಕೆ ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಂದಾಗ ದೇಸಿ ಕಲೆ ಉಳಿಯುವುದಲ್ಲದೇ ರಂಗಭೂಮಿ ಕಲಾವಿದರಿಗೆ ಹೊಸ ಚೈತನ್ಯ ಬರಲಿದೆ ಎಂದರು.
ವಿ.ಎಲ್. ನಾಡಗೌಡ್ರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಂಗಭೂಮಿಯನ್ನು ಬಹಳಷ್ಟು ಕಡೆಗಣಿಸಲಾಗುತ್ತಿದ್ದು, ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ನಾಟಕ ಇಲ್ಲವಾಗುತ್ತದೆ. ಇಂದಿನ ಯುವಕರು ನಾಟಕಗಳನ್ನು ನೋಡಿ ಪ್ರೊತ್ಸಾಹಿಸುವ ಮೂಲಕ ಎಲ್ಲರೂ ರಂಗಭೂಮಿಯನ್ನು ಒಪ್ಪಿಕೊಳ್ಳಬೇಕು ಎಂದರು. ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿದರು.
ನಾರಾಯಣಪ್ಪ ಇಲ್ಲೂರ, ಅಂದಪ್ಪ ಬೆಲ್ಲದ, ಕರಬಸಪ್ಪ ಹಂಚಿನಾಳ, ಹೇಮಂತಗೌಡ ಪಾಟೀಲ, ಹೇಮಗಿರೀಶ ಹಾವಿನಾಳ, ರವೀಂದ್ರ ಉಪ್ಪಿನಬೆಟಗೇರಿ, ಆನಂದಗೌಡ ಪಾಟೀಲ, ಕೊಟ್ರೇಶ ಅಂಗಡಿ, ಧ್ರುವಕುಮಾರ ಹೊಸಮನಿ, ಸೋಲಬಣ್ಣ ಜೋಬಾಳಿ, ಎ.ಪಿ. ದಂಡಿನ, ಶರಣಪ್ಪ ಕುಬಸದ, ಎಸ್. ಪ್ರಬಾಕರ, ಬಸವರಾಜ ರಾಮೇನಹಳ್ಳಿ, ಅಬ್ದುಲ್ ಖುರೇಶಿ, ಪಾಲಾಕ್ಷಿ ಗಣದಿನ್ನಿ, ವೀರೇಶ ಸಜ್ಜನ, ಮುದಿಯಪ್ಪ ಕುಂಬಾರ, ಲಿಂಗರಾಜಗೌಡ ಪಾಟೀಲ, ರಾಘವೇಂದ್ರ ಕುರಿಯವರ ಇತರರಿದ್ದರು.