ಉಪಯೋಗವಾಗದ ಗ್ರಾಮೀಣ ರೈತ ಸಂತೆ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಮೇ 23
ರೈತರಿಗೆ ತಮ್ಮ ಸರಕುಗಳನ್ನು ಮಾರಲೆಂದು, ವ್ಯಾಪಾರ ವಹಿವಾಟು ನಡೆಸಲೆಂದು ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಿರ್ಮಾಣಗೊಂಡಿರುವ ಅಬ್ಬಿಗೇರಿಯ ರೈತ ಗ್ರಾಮೀಣ ಸಂತೆ ರೈತರಿಗೆ ಉಪಯೋಗವಾಗದೇ ಹಾಳಾಗುತ್ತಿದೆ.
2008-09ರಲ್ಲಿ ಸಮೀಪದ ಅಬ್ಬಿಗೇರಿಗೊಂದು ಗ್ರಾಮೀಣ ರೈತ ಸಂತೆ ಅವಶ್ಯಕತೆ ಮನಗಂಡ ಹೊಳೆ ಆಲೂರನ್ನು ಮುಖ್ಯ ಕಚೇರಿಯಾಗಿ ಹೊಂದಿರುವ ಕೃಷಿ ಉತ್ಪನ್ನ ಮಾರುಕಟ್ಟೆ ರು. 11.13 ಲಕ್ಷ ವೆಚ್ಚದಲ್ಲಿ ಆರ್ಐಡಿಎಫ್ ಯೋಜನೆಯಡಿ ಗ್ರಾಮೀಣ ರೈತ ಸಂತೆಯೊಂದನ್ನು ನಿರ್ಮಿಸಿದೆ. ನಿರ್ಮಾಣವಾದ ದಿನದಿಂದಲೂ ಸಾರ್ವಜನಿಕರಿಗೆ ವಿಶ್ರಾಂತಿ ಗೃಹವಾಗಿ ಪರಿವರ್ತನೆಗೊಂಡಿರುವ ಈ ಸ್ಥಳವು ಮಹಿಳೆಯರಿಗೆ ಬಟ್ಟೆ ಒಣಗಿಸುವ ತಾಣವಾಗಿದೆ.
ಪ್ರಸಕ್ತ ಬಿರು ಬೇಸಿಗೆ. ಹೀಗಾಗಿ ಗ್ರಾಮದ ಸಾರ್ವಜನಿಕರು ಮಧ್ಯಾಹ್ನ ಮತ್ತು ರಾತ್ರಿ ಹೊತ್ತು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ನಿದ್ದೆಗೂ ಮೊದಲು ಚಕ್ಕಾ, ಹುಲಿಮನಿ ಮುಂತಾದ ಆಟಗಳನ್ನೂ ಆಡುತ್ತಿದ್ದಾರೆ. ಗ್ರಾಮೀಣ ಸಂತೆ ಕುರಿತು ಯಾವುದೇ ಕಾಳಜಿ ಇಲ್ಲದಿರುವುದರಿಂದ ತನ್ನ ರೂಪ ಕಳೆದುಕೊಳ್ಳುತ್ತಿದೆ. ಇದರಿಂದ ಗ್ರಾಮೀಣ ರೈತ ಸಂತೆಯ ಮೂಲ ಉದ್ದೇಶವೇ ಮರೆಯಾಗಿದ್ದು, ಅನ್ಯ ಕಾರ್ಯಗಳಿಗೆ ಉಪಯೋಗವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮೀಣ ರೈತ ಸಂತೆಗೆ ಸ್ಥಳ ವರ್ಗಾವಣೆ ಮಾಡುವ ಮೊದಲು ಗ್ರಾಮ ಪಂಚಾಯತಿಯವರು ಅಲ್ಲಿನ ಅಕ್ಕಪಕ್ಕದಲ್ಲಿರುವ ಶೌಚಾಲಯಗಳಿಂದ ಬರುವ ದುರ್ಗಂಧವನ್ನು ದೂರ ಮಾಡಬೇಕು. ಸುತ್ತಲಿನ ಕಸ ಸಂಪೂರ್ಣ ನಾಶ ಮಾಡಿ ಅಲ್ಲಿ ಹೆಚ್ಚಿನ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಇಲ್ಲವಾದರೆ ಸಂತೆ ವರ್ಗಾವಣೆಗೆ ಯಾವ ಅರ್ಥವೂ ಇರುವುದಿಲ್ಲ ಎಂಬುದು ಬಹುತೇಕರ ಅಭಿಪ್ರಾಯ. ಸದ್ಯಕ್ಕೆ ಗ್ರಾಮೀಣ ರೈತ ಸಂತೆ ಕಟ್ಟಡವು ಅತ್ತ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಇತ್ತ ಗ್ರಾಮ ಪಂಚಾಯಿತಿಗಳ ಸಂಘರ್ಷದಲ್ಲಿ ಬಡವಾಗುತ್ತಿದೆ. ಸಂತೆ ತನ್ನ ಉದ್ದೇಶಕ್ಕೆ ತನ್ನನ್ನು ತಾನೆ ಅರ್ಪಿಸಿಕೊಳ್ಳಬೇಕೆಂಬುದು ಎಲ್ಲರ ಆಸೆ.
ರೈತ ಸಂತೆ ಕಟ್ಟಡ ನಿರ್ಮಾಣಕ್ಕೆ ಆಯಾ ಗ್ರಾಮದವರು ಜಾಗೆ ನೀಡಿರುತ್ತಾರೆ. ಕಟ್ಟಡ ನಿರ್ಮಾಣವಾದ ಕೂಡಲೇ ಅದನ್ನು ಮರಳಿ ಗ್ರಾಪಂನವರ ಸುಪರ್ದಿಗೆ ಕೊಡುವುದು ನಮ್ಮ ಕೆಲಸ. ಈ ಕೆಲಸವನ್ನು ನಮ್ಮ ಕಚೇರಿ ಸಿಬ್ಬಂದಿ ಈಗಾಗಲೆ ಮಾಡಿದ್ದು, ಈ ಕಟ್ಟಡದ ಮೇಲುಸ್ತುವಾರಿ ವಹಿಸಿಕೊಳ್ಳಲು ನಿಮ್ಮ ಸುಪರ್ದಿಗೆ ಹಸ್ತಾಂತರಿಸಿಕೊಳ್ಳಿ ಎಂದು ಹಲವಾರು ಬಾರಿ ಪತ್ರ ಬರೆದರೂ ಅಬ್ಬಿಗೇರಿ ಗ್ರಾಪಂನಿಂದ ಪ್ರತಿಕ್ರಿಯೆ ಬಂದಿಲ್ಲ. ಅದಕ್ಕೆ ಏನೇನೋ ಕಾರಣಗಳನ್ನು ಹೇಳಲಾಗುತ್ತಿದೆ. ಶೀಘ್ರ ಗ್ರಾಪಂದವರು ಸುಪರ್ದಿಗೆ ತೆಗದುಕೊಳ್ಳಬೇಕು.
ಎಪಿಎಂಸಿ ಅಧ್ಯಕ್ಷ
ನಾನು ಈಚೆಗೆ ಆಯ್ಕೆಗೊಂಡಿದ್ದೇನೆ. ಈ ಬಾರಿ ಸಭೆಯಲ್ಲಿ ಮೊದಲ ಆದ್ಯತೆಯಾಗಿ ಈ ವಿಷಯ ತೆಗೆದುಕೊಳ್ಳುತ್ತೇನೆ. ಇಲ್ಲಿನ ಗ್ರಾಪಂಗೂ ಭೇಟಿ ನೀಡಿ ಆ ಕಟ್ಟಡ ಹಸ್ತಾಂತರಿಸಿಕೊಳ್ಳುವಲ್ಲಿ ಆಗಿರುವ ತೊಂದರೆಗಳೇನು ಎಂಬುದನ್ನು ತಿಳಿದುಕೊಂಡು ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸುತ್ತೇನೆ.
ಎಪಿಎಂಸಿ ಸದಸ್ಯ