ಎಲ್ಲರೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಿ: ನಾರಾಯಣ
ಶಿರಹಟ್ಟಿ: ಗ್ರಾಮಗಳಲ್ಲಿ ಪ್ರತಿಯೊಬ್ಬರೂ ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡಿ, ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡಲು ಸರ್ಕಾರದ ಸಹಾಯಧನ ಪಡೆದು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಿ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ. ನಾರಾಯಣ ತಿಳಿಸಿದರು.
ಗುರುವಾರ ತಾಲೂಕಿನ ಛಬ್ಬಿ ಗ್ರಾಮದಲ್ಲಿ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡ 19 ಫಲಾನುಭವಿಗಳ ಮನೆಗೆ ತೆರಳಿ ಶೌಚಾಲಯ ಪರಿಶೀಲಿಸಿ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ತಾಲೂಕಿನ 24 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7,920 ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಸದ್ಯ ತಾಲೂಕಿನಲ್ಲಿ 2 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಶೇ. 30 ಸಾಧನೆಯಾಗಿದ್ದು, ಇನ್ನೂ ಹೆಚ್ಚು ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಬೇಕಿದೆ. ಶೌಚಾಲಯ ನಿರ್ಮಿಸಿಕೊಳ್ಳಲು ಒಬ್ಬ ಫಲಾನುಭವಿಗೆ ರು. 9,200 ಪ್ರೋತ್ಸಾಹಧನ ನೀಡುತ್ತಿದೆ. ಯೋಜನೆಯ ಸದುಪಯೋಗ ಪಡೆಯಿರಿ ಎಂದರು.
ಗ್ರಾಪಂ ಸದಸ್ಯ ಆರೋಪ: ಗ್ರಾಪಂ ಸದಸ್ಯ ದೇವಪ್ಪ ಲಮಾಣಿ, ಈ ಹಿಂದೆ ತಾಪಂ ಕಚೇರಿ ಮುಂದೆ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದಕ್ಕೆ 19 ಫಲಾನುಭವಿಗಳಿಗೆ ಚೆಕ್ ನೀಡಲು ಮುಂದಾಗಿದ್ದಾರೆ. ತಾಲೂಕಾದ್ಯಂತ ಯೋಜನೆ ಸಂಪೂರ್ಣ ವಿಫಲವಾಗಿದ್ದು, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೇ ಇದಕ್ಕೆ ಕಾರಣ ಎಂದರು. ಗ್ರಾಪಂ ಅಧ್ಯಕ್ಷ ಶಿವಪ್ಪ ಹರತಾಳ, ಉಪಾಧ್ಯಕ್ಷೆ ದೇವಕ್ಕ ಕಾರಬಾರಿ, ಹನುಮಂತಗೌಡ ಪಾಟೀಲ, ಜಿಪಂ ಜಿಲ್ಲಾ ಸಮಾಲೋಚಕ ಎಚ್.ಎಫ್. ಕೂಸಣ್ಣವರ, ಪಿಡಿಒ ಡಿ.ಎಂ. ನದೀಮುಲ್ಲಾ, ಗಂಗಪ್ಪ ಮಾಗಡಿ, ಚನ್ನಪ್ಪ ಲಮಾಣಿ, ಶ್ರೀಕಾಂತ ಗಾಳೆ, ಚೋಕಲಪ್ಪ ರಾಠೋಡ್, ಶೇಖರ ಲಮಾಣಿ ಇದ್ದರು.