ನೀತಿ ಸಂಹಿತೆ ಜಾರಿ
ಗದಗ: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈ ವಾರ್ಷಿಕ ಚುನಾವಣೆ-2014ನೇದ್ದಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಹೊರಡಿಸಿದೆ. ಜೂ. 20ರಂದು ಮತದಾನವು ಜರುಗಲಿದ್ದು, ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯು ಮೇ 20ರಿಂದ ಜಾರಿಗೆ ಬಂದಿದ್ದು, ನೀತಿಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು ಡಿಸಿ ಎನ್.ಎಸ್. ಪ್ರಸನ್ನಕುಮಾರ ತಿಳಿಸಿದ್ದಾರೆ.
ಮತದಾರರ ಸೇರ್ಪಡೆ
ಗದಗ: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂತಿಮ ಮತದಾರ ಪಟ್ಟಿಗಳನ್ನು ಜನವರಿ 10 ರಂದು ಪ್ರಕಟಿಸಲಾಗಿದೆ. ಈ ಮತದಾರ ಪಟ್ಟಿಯಲ್ಲಿ ಹೆಸರು ನಮೂದ ಆಗದೇ ಇರುವವರು 31.10.2010ರ ಪೂರ್ವದಲ್ಲಿ ಪದವಿ ಪೂರ್ಣಗೊಳಿಸಿದ್ದಲ್ಲಿ ತಮ್ಮ ಹೆಸರುಗಳನ್ನು ಪಶ್ಚಿಮ ಪದವೀಧರರ ಮತಕ್ಷೇತ್ರದ ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ನಿಗದಿಪಡಿಸಿದ ನಮೂನೆ 18ರಲ್ಲಿ ಮತದಾರ ಪಟ್ಟಿಯಲ್ಲಿ ಪ್ರಕಟಿಸಿರುವ ಹೆಸರು, ವಿಳಾಸ ಅಥವಾ ಇತರೆ ಯಾವುದೇ ತಿದ್ದುಪಡಿಗಳಿದ್ದಲ್ಲಿ ನಮೂನೆ 8ರಲ್ಲಿ, ಕರಡು ಮತದಾರ ಪಟ್ಟಿಯಿಂದ ಹೆಸರನ್ನು ಕೈಬಿಡಲು ನಮೂನೆ 7ರಲ್ಲಿ ಹಾಗೂ ಈ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವರ್ಗಾವಣೆಗಾಗಿ ನಮೂನೆ 8ಎರಲ್ಲಿ ಅರ್ಜಿಗಳನ್ನು ತಮ್ಮ ಸಂಬಂಧಿಸಿದ ತಹಸೀಲ್ದಾರರು ಅಥವಾ ತಹಸೀಲ್ದಾರ್ ಕಾರ್ಯಾಲಯದ ಚುನಾವಣಾ ಶಿರಸ್ತೇದಾರರಿಗೆ ಆಯೋಗದ ನಿರ್ದೇಶನದಂತೆ ಸಲ್ಲಿಸತಕ್ಕದ್ದು. ಈ ಕುರಿತು ಸ್ವೀಕೃತವಾಗುವ ಅರ್ಜಿಗಳ ಪೈಕಿ ಆಯೋಗದ ನಿರ್ದೇಶನದಂತೆ ಮೇ 24ರ ವರೆಗೆ ಸ್ವೀಕೃತವಾಗುವ ಅರ್ಜಿಗಳನ್ನು ಮಾತ್ರ ಪ್ರಸ್ತುತ ಚುನಾವಣೆಗೆ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.