ಎಸ್.ಎಂ. ಕೃಷ್ಣ ನಗರ ಸಮಸ್ಯೆ ನಿವಾರಿಸಿ
ಗದಗ ನಗರದ ಎಸ್.ಎಂ. ಕೃಷ್ಣ ನಗರದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಈಗಾಗಲೇ ಹಲವಾರು ಬಾರಿ ನಗರಸಭೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇಲ್ಲಿನ ಚರಂಡಿಗಳು ಕೊಳಕಿನಿಂದ ತುಂಬಿ ತುಳುಕುತ್ತಿವೆ. ಇನ್ನು ಕುಡಿವ ನೀರಿಗೂ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಈ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಅಧಿಕಾರಿಗಳು ತಾಳುತ್ತಿರುವ ದಿವ್ಯ ನಿರ್ಲಕ್ಷ್ಯದಿಂದಾಗಿ ಜನತೆ ಕುಡಿವ ನೀರಿಗಾಗಿ ಪರಿತಪಿಸುವಂತಾಗಿದೆ. ಬಹುತೇಕ ಈ ನಗರದಲ್ಲಿ ಬಡವರೇ ವಾಸಿಸುವುದರಿಂದ ಅವರೆಲ್ಲ ನಿತ್ಯದ ದುಡಿಮೆಗಾಗಿ ಹೊರಗಡೆ ಕೆಲಸಕ್ಕೆ ಹೋಗುವುದು ಅನಿವಾರ್ಯ. ತಿಂಗಳಿಗೊಮ್ಮೆ ನೀರು ಪೂರೈಕೆ ಮಾಡುವ ನಗರಸಭೆಯ ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹೀಗಾಗಿ, ನೀರು ಬಂದ ದಿನ ಕೊಡ ನೀರಿಗಾಗಿ ಕೆಲಸವನ್ನೇ ಬಿಟ್ಟು ಕುಳಿತುಕೊಳ್ಳುವಂತಾಗಿದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳು ಕೂಡಲೇ ಗಮನ ನೀಡಬೇಕು ಮತ್ತು ಎಸ್.ಎಂ. ಕೃಷ್ಣ ನಗರದ ಸಮಸ್ಯೆಗಳ ಬಗ್ಗೆ ಗಮನ ನೀಡಬೇಕಿದೆ.
- ಎಸ್.ಎಫ್. ಜಾಲಿಗಿಡದ
ಎಸ್.ಎಂ. ಕೃಷ್ಣ ನಗರದ ನಿವಾಸಿಙ
ಕೌಜಗೇರಿ: ರಸ್ತೆ ದುರಸ್ತಿ ಮಾಡಿ
ಗದಗ ಜಿಲ್ಲೆಯ ರೋಣ ತಾಲೂಕಿನ ಕೌಜಗೇರಿ ಗ್ರಾಮದಲ್ಲಿರುವ ಬಸ್ ನಿಲ್ದಾಣದ ಬಳಿ ಇರುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಳೆ ಬಂದರೆ ಸಾಕು ರಸ್ತೆಗಳು ಕೆಸರಿನ ಹೊಂಡವಾಗುತ್ತವೆ. ಈ ಕುರಿತು ಹಲವಾರು ಬಾರಿ ಗ್ರಾಪಂ ಆಡಳಿತ ಮಂಡಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯದಲ್ಲಿಯೇ ಮುಂಗಾರು ಮಳೆ ಪ್ರಾರಂಭವಾಗುವುದರಿಂದ ಗ್ರಾಮದಲ್ಲಿನ ವಯೋವೃದ್ಧರು ಹಾಗೂ ಮಕ್ಕಳ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಲಿದೆ. ರಸ್ತೆಯ ಈ ಅವ್ಯವಸ್ಥೆಯಿಂದಾಗಿ ಗ್ರಾಮದ ವರೆಗೆ ಬರುತ್ತಿದ್ದ ಬಸ್‌ಗಳು ಈಗ ಗ್ರಾಮದಿಂದ ದೂರದಲ್ಲಿರುವ ಮುಖ್ಯ ಕ್ರಾಸ್ ಬಳಿಯೇ ನಿಲುಗಡೆ ಮಾಡುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅದಕ್ಕಾಗಿ ಗ್ರಾಪಂ ಆಡಳಿತ ವರ್ಗ, ತಾಲೂಕು ಪಂಚಾಯ್ತಿ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿರುವ ಮುಖ್ಯ ರಸ್ತೆಯನ್ನು ದುರಸ್ತಿ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
- ಯಮನಪ್ಪ
ಕೌಜಗೇರಿ ಗ್ರಾಮಸ್ಥ