ಸಲೀಂ ಅಹ್ಮದ್ ಆರೋಪ ಸರಿಯಲ್ಲ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 25
ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಸೋಲು ಅನುಭವಿಸಿದ್ದನ್ನು ಎಲ್ಲ ಕಾಂಗ್ರಸ್ಸಿಗರು ಪಕ್ಷದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುತ್ತಿರುವಾಗ ಸ್ವತಃ ಅಭ್ಯರ್ಥಿಯೇ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಮೇಲೆ ಆರೋಪ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹೇಮಂತಗೌಡ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ವರ್ಷ ಜರುಗಿದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದಿಂದ ಕಾಂಗ್ರೆಸ್‌ನ ಸುಮಾರು 24 ಜನ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಪಕ್ಷದ ವರಿಷ್ಠರು ಕೊನೆಯ ಕ್ಷಣದಲ್ಲಿ ರಾಮಕೃಷ್ಣ ದೊಡ್ಡಮನಿಗೆ ಟಿಕೆಟ್ ನೀಡಿದಾಗ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಅವರನ್ನು ಒಮ್ಮತದಿಂದ ಆರಿಸಿ ತರುವಲ್ಲಿ ಯಶಸ್ವಿಯಾಗಿದ್ದೇವೆ.
ಅಲ್ಲದೇ ಜಿಲ್ಲೆಯ 4 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿದ್ದು ನಮ್ಮ ಜಿಲ್ಲೆಯ ಹೆಮ್ಮೆಯ ವಿಷಯ. ಇದಕ್ಕೆಲ್ಲ ಮಾಜಿ ಶಾಸಕ ಡಿ.ಆರ್. ಪಾಟೀಲ, ಸಚಿವ ಎಚ್.ಕೆ. ಪಾಟೀಲ ಹಾಗೂ ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಅವರೇ ಕಾರಣ.
ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಹಂತದ ಅಧಿಕಾರದ ಅನುಭವ ಹೊಂದಿರುವ ಸಲೀಂ ಅಹ್ಮದ್ ಅವರನ್ನು ಅತ್ಯಂತ ಹತ್ತಿರದಿಂದ ಅವರ ಅಭಿಮಾನಿಗಳಾಗಿ ಕಂಡವರು ನಾವು. ಅವರು ನೀಡಿರುವ ಹೇಳಿಕೆ ಸರಿಯಲ್ಲ.
ನಮ್ಮ ಪಕ್ಷದ ಅಭ್ಯರ್ಥಿಯ ಸೋಲು-ಗೆಲವು ಎಲ್ಲ ಜಾತಿ, ಸಮುದಾಯದವರ ಮೇಲೆ ಇರುತ್ತದೆ. ಅದಕ್ಕೆ ನಾವೆಲ್ಲರೂ ಹೊಣೆಗಾರರು. ಆದರೆ ಸಲೀಂ ಅಹ್ಮದ್ ಸೋಲಿಗೆ ಒಂದು ಸಮುದಾಯದವರು ಹೋರಾಟಕ್ಕಿಳಿದಿರುವುದು ವಿಷಾದನೀಯ ಹಾಗೂ ಖಂಡನೀಯ.
ಮುಂಡರಗಿಯಲ್ಲಿ ಹೋರಾಟಕ್ಕಿಳಿದಿರುವವರಲ್ಲಿ ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ತಮ್ಮ ಜೀವನದಲ್ಲಿ ಕಾಂಗ್ರೆಸ್‌ಗೆ ಅವರು ನೀಡಿದ ಕೊಡುಗೆ ಏನು? ಸ್ಥಳೀಯ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ಸೋಲಿಗೆ ಕಾರಣರಾದವರಿಗೆ ಪಕ್ಷದ ಮುಖಂಡರ ಬಗ್ಗೆ ಹಾಗೂ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.
ಇದಕ್ಕೆ ಜಾತಿಯ ಬಣ್ಣ ಬಳಿಯುವವರನ್ನು ಸಮಾಜ ಎಂದಿಗೂ ಕ್ಷಮಿಸುವುದಿಲ್ಲ ಎಂದು ರಾಮಣ್ಣ ಬಳ್ಳಾರಿ, ಬಸವರಾಜ ರಾಮೇನಹಳ್ಳಿ, ಕೊಟ್ರೇಶ ಅಂಗಡಿ, ಧೃವಕುಮಾರ ಹೊಸಮನಿ, ಡಿ.ಎಲ್. ಕಲ್ಲುಕುಟಗಾರ, ರುದ್ರಗೌಡ ಪಾಟೀಲ, ಶೇಖರ ಜುಟ್ಲನ್ನವರ, ಭಾರತಿ ಹಕ್ಕಿ, ಸೋಮನಗೌಡ ಗೌಡ್ರ, ಚಂದ್ರಶೇಖರ ಬಡಿಗೇರ, ಫಕ್ರುಸಾಬ ಹಾರೋಗೇರಿ, ಪಾಲಾಕ್ಷಿ ಗಣದಿನ್ನಿ, ಅಲ್ಲಾಭಕ್ಷಿ ಬೆಟಗೇರಿ, ದುದ್ದುಪೀರ್ ಖಾತರಕಿ, ರಾಘವೇಂದ್ರ ಕುರಿಯವರ, ವೀರೇಶ ಸಜ್ಜನರ, ಅಬ್ದುಲ್ ಖುರೇಶಿ, ಎ.ಪಿ. ದಂಡಿನ, ಮೋದಿನಸಾಬ್ ಡಂಬಳ, ವೀರಣ್ಣ ತುಪ್ಪದ, ರಾಮು ಭಜಂತ್ರಿ, ಲಿಂಗರಾಜಗೌಡ ಪಾಟೀಲ ಮುಂತಾದವರು ಖಂಡಿಸಿದ್ದಾರೆ.