ಸಲೀಂ ಆತ್ಮಾವಲೋಕನ ಮಾಡಿಕೊಳ್ಳಲಿ
ಗದಗ: ತಮ್ಮ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಲ್ಲಿಯೂ ಅಭ್ಯರ್ಥಿ ಸಲೀಂ ಅಹ್ಮದ ಸೋತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ದೇಶದಲ್ಲಿ ಬೀಸಿರುವ ಬದಲಾವಣೆ ಗಾಳಿಯ ಫಲವನ್ನೂ ಗಮನಿಸದಿರುವಂತಹ ಸ್ಥಿತಿ ತಲುಪಿರುವುದು ದು:ಖದ ಸಂಗತಿ. ತಮ್ಮ ಸೋಲನ್ನು ಇನ್ನೊಬ್ಬರ ಹೆಗಲಿಗೆ ಹಾಕಿ ಮಾಡುತ್ತಿರುವ ಆಪಾದನೆಗಳನ್ನು ತೀವ್ರವಾಗಿ ಖಂಡಿಸುತ್ತೇವೆ.
ಈ ಸಲ ಪಕ್ಷದ ಟಿಕೆಟ್ ಹಂಚುವ ಪ್ರಸಂಗದಲ್ಲಿ ಗದಗ ಜಿಲ್ಲೆಯ ಹಾಗೂ ಹಾವೇರಿ ಜಿಲ್ಲೆಯ ಆರು ಶಾಸಕರ ಜತೆಗೆ ಇಬ್ಬರು ವಿಧಾನಪರಿಷತ್ತ ಸದಸ್ಯರು ಸ್ಥಳೀಯರು ಹಾಗೂ ಪಕ್ಷದ ನಿಷ್ಠಾವಂತ ನಾಯಕ ಡಿ.ಆರ್. ಪಾಟೀಲರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂದು ಪಕ್ಷದ ವರಿಷ್ಠರಿಗೆ ಪತ್ರದೊಂದಿಗೆ ವಿನಂತಿಸಿದ್ದರು. ಆದರೆ ಪಕ್ಷದ ನಿಲುವು ಸಲೀಂ ಅಹ್ಮದ್ ಪರವಾಗಿ ಪ್ರಕಟವಾದಾಗ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ತೊಡಗಿಸಿಕೊಂಡಿದ್ದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪಕ್ಷ ನಿಷ್ಠೆಯನ್ನು ಯಾರೂ ಪ್ರಶ್ನಿಸಿಲ್ಲ. ಒಗ್ಗಟ್ಟಿಗೆ ನಾವು ಉದಾಹರಣೆಯಾಗಿದ್ದೆವು. ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಗಳಿಗಿಂತ ಈ ಸಲ ಕಾಂಗ್ರೆಸ್‌ಗೆ ಹನ್ನೊಂದು ಸಾವಿರಕ್ಕಿಂತ ಅಧಿಕ ಮತಗಳು ದೊರೆತಿವೆ. ಇಲ್ಲಿಯೂ ಮೀರಸಾಧಕರನ್ನು ನೋಡುವ ಸಲೀಂ ಅಹ್ಮದರಿಗೆ ಸೇಡಿನ ಕಾಮಣಿಯಾಗಿದೆ ಎಂದು ಭಾವಿಸಬೇಕಾಗುತ್ತದೆ. ಇಂದು ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟು ಬಲಪಡಿಸುವ ಕೆಲಸ ನಡೆಯಬೇಕಾಗಿದೆ. ಪಕ್ಷವನ್ನು ಜನಪರ ಸೇವೆ, ಸಮಾಜಮುಖಿ ಕೆಲಸಗಳಿಗೆ ಸಜ್ಜುಗೊಳಿಸಬೇಕಾಗಿದೆ. ಇಂಥ ಪರೀಕ್ಷಾ ಕಾಲದಲ್ಲಿ ವೈಯಕ್ತಿಕವಾಗಿ ರಾಜಕೀಯ ದುರುದ್ದೇಶದಿಂದ ನಾಯಕರ ವರ್ಚಸ್ಸಿಗೆ ಧಕ್ಕೆ ಮಾಡಿ ಪಕ್ಷಕ್ಕೆ ಅನ್ಯಾಯಮಾಡುವುದನ್ನು ಸಲೀಂ ಅಹ್ಮದ್ ನಿಲ್ಲಿಸಬೇಕೆಂದು ಒತ್ತಾಸುತ್ತೇವೆ. ಜಿಲ್ಲಾ ಮುಖಂಡರ, ಶಾಸಕರ, ಹಿರಿಯರ ಗೌರವಕ್ಕೆ ಚ್ಯುತಿ ಬರುವಂಥ ಕೆಲಸ ಮಾಡುತ್ತಿರುವುದನ್ನು ಖಂಡಿಸುತ್ತೇವೆ ಎಂದು ಕೆಪಿಸಿಸಿ ಸದಸ್ಯ ವಾಸಣ್ಣ ಕುರಡಗಿ, ಗುರಣ್ಣ ಬಳಗಾನೂರು, ಪರಪ್ಪ ಬಂದಕ್ಕನವರ, ನಗರಸಭೆಯ ಅಧ್ಯಕ್ಷೆ ರುದ್ರವ್ವ ಕೆರಕಲಮಟ್ಟಿ, ಉಪಾಧ್ಯಕ್ಷ ಕೃಷ್ಣಾ ಪರಾಪುರ, ಅಶೋಕ ಮಂದಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.