ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಿಬ್ಬಂದಿ ಕೊರತೆ: ತಲುಪದ ಔಷಧಿ

Rashmi Kasaragodu
Updated On : 26 May 2014, 12:06 pm

ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ಜಾನುವಾರುಗಳು ಕಾಯಿಲೆಯಿಂದ ಬಳಲಿ ನರಳಬಾರದೆಂಬ ಉದ್ದೇಶದಿಂದ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಜಾನುವಾರುಗಳಿಗೆ ಕಾಣಿಸಿಕೊಳ್ಳುವ ಎಲ್ಲ ಬಗೆಯ ಕಾಯಿಲೆ ನಿವಾರಣೆಗೆ ಸಮರ್ಪಕ ಔಷಧಿ ಪೂರೈಕೆ ಮಾಡಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಜಾನುವಾರುಗಳನ್ನು ತಪಾಸಣೆ ಮಾಡುವವರಿಲ್ಲದಾಗಿದೆ.
ಪಟ್ಟಣದ ಪಶು ಆಸ್ಪತ್ರೆಯಲ್ಲಿ ಕಳೆದೆರಡು ವರ್ಷಗಳಿಂದಲೂ ಕಾಯಂ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಡಿ. ಮೋಹನ್ ಅವರು ಸಂಬಳ ಪಡೆಯಲು ಮಾತ್ರ ಆಸ್ಪತ್ರೆಗೆ ಆಗಮಿಸುತ್ತಿದ್ದು, ಇಲ್ಲಿನ ಸ್ಥಿತಿ-ಗತಿ ಮತ್ತು ರೈತರ ಜಾನುವಾರುಗಳಿಗೆ ಬಂದ ಕಾಯಿಲೆ ಬಗ್ಗೆ ಯೋಚನೆ ಮಾಡುವುದಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.
ಸದ್ಯ ಮುಂಡರಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂದು ಕೆಲಸ ಮಾಡುತ್ತಿದ್ದಾರೆ. ರೈತರು ನಿತ್ಯ ಆಸ್ಪತ್ರೆಗೆ ಜಾನುವಾರುಗಳನ್ನು ತಪಾಸಣೆಗೆ ತಂದು ವೈದ್ಯರಿಲ್ಲದೆ ಹಿಡಿ ಶಾಪ ಹಾಕಿ ಹೋಗುವಂತಾಗಿದೆ.
ಅನೈತಿಕ ಚಟುವಟಿಕೆ ತಾಣ: ಆಸ್ಪತ್ರೆಯಲ್ಲಿ ಹಲವಾರು ಹುದ್ದೆಗಳು ಖಾಲಿಯಿದ್ದು, ಜಾನುವಾರುಗಳಿಗೆ ಕಾಣಿಸಿಕೊಳ್ಳುವ ಕಾಯಿಲೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ. ಪರಿಣಾಮ ಜಾನುವಾರುಗಳನ್ನು ತಪಾಸಣೆಗೆ ತಂದ ರೈತರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳುತ್ತಿದ್ದಾರೆ. ಹಲವಾರು ಬಾರಿ ಚುನಾಯಿತ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಆಸ್ಪತ್ರೆಯತ್ತ ತಿರುಗಿ ನೋಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಸುಸಜ್ಜಿತ ಪಶು ಆಸ್ಪತ್ರೆ ಕಟ್ಟಡ, ವಿಶಾಲವಾದ ಬಯಲು ಜಾಗೆ ಕಳ್ಳ ಕಾಕರಿಗೆ ಮತ್ತು ಅನೈತಿಕ ಚಟುವಟಿಕೆಯಲ್ಲಿ ತೊಡಗುವವರಿಗೆ ಬಳಕೆಯಾಗುತ್ತಿದೆ.
ತಾಲೂಕಿನ ಯಳವತ್ತಿ, ಮಾಗಡಿ, ಕಡಕೋಳ, ಹೆಬ್ಬಾಳ, ಹೊಳೆ ಇಟಗಿ ಗ್ರಾಮಗಳಲ್ಲಿಯೂ ಪಶು ವೈದ್ಯಕೀಯ ಪರೀಕ್ಷಕರಿಲ್ಲದ ಕಾರಣ ಪಶುಚಿಕಿತ್ಸಾಲಯಕ್ಕೆ ಕಾಯಂ ಬೀಗ ಜಡಿದಿರುತ್ತಾರೆ.
ಸರ್ಕಾರ ಪೂರೈಕೆ ಮಾಡಿದ ದುಬಾರಿ ಔಷಧಿ ಜಾನುವಾರುಗಳಿಗೆ ಉಪಯೋಗವಾಗದೆ ಅವಧಿ ಮೀರಿ ನಾಶವಾಗುತ್ತಿವೆ. ತಾಲೂಕಿನಲ್ಲಿ ಹಲವಾರು ವರ್ಷಗಳಿಂದಲೂ ಇದೇ ವ್ಯವಸ್ಥೆ ಇದ್ದು, ಶಾಸಕರಾಗಲಿ, ಆ ಕ್ಷೇತ್ರಕ್ಕೆ ಸಂಬಂಧಿಸಿದ ತಾಪಂ ಸದಸ್ಯರಾಗಲಿ ಗಂಭೀರವಾಗಿ ಪರಗಣಿಸದಿರುವುದು ರೈತರ ಬಗೆಗಿನ ಅವರ ಕಾಳಜಿ ಎತ್ತಿ ತೋರಿಸುತ್ತಿದೆ.


ಕೆಲಸದಿಂದ ವಜಾ ನಿರ್ಣಯ
ರೈತರ ಜಾನುವಾರುಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಕೇಳಿ ಬರುತ್ತಿರುವ ದೂರಗಳ ಹಿನ್ನೆಲೆಯಲ್ಲಿ ಮೇ 20ರಂದು ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ತಿಮ್ಮರಡ್ಡಿ ಅಳವಂಡಿ, ನಿಂಬಣ್ಣ ಮಡಿವಾಳರ ಡಾ. ಡಿ. ಮೋಹನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ವೇತನದ ಜತೆ ಇತರ ಎಲ್ಲ ಸೌಲಭ್ಯಗಳನ್ನು ಶಿರಹಟ್ಟಿ ಪಟ್ಟಣದ ಪಶು ಆಸ್ಪತ್ರೆಯಿಂದ ಪಡೆಯುತ್ತಿದ್ದು, ಕೆಲಸವನ್ನು ಮುಂಡರಗಿ ತಾಪಂನಲ್ಲಿ ಮಾಡುತ್ತಿರುವುದು ಸರಿಯಲ್ಲ. ಮೊದಲಿಗೆ ಇವರನ್ನು ತೆಗೆದು ಹಾಕುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.


ಪಶು ವೈದ್ಯರ ಕೊರತೆಯಿಂದಾಗಿ ಬಹುತೇಕ ಆಸ್ಪತ್ರೆಗಳಲ್ಲಿ ತೊಂದರೆ ಕಂಡು ಬರುತ್ತಿದೆ. ತಾಲೂಕು ಮಟ್ಟದ ಆಸ್ಪತ್ರೆಗಳಿಂದ ಬಂದ ಮಾಹಿತಿಯನ್ನು ಸರ್ಕಾರಕ್ಕೆ ಪ್ರಸ್ತಾವನೆಗೆ ಸಲ್ಲಿಸಲಾಗಿದೆ. ಜಿಪಂ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ 3 ವರ್ಷಗಳಿಂದಲೂ ಶಿರಹಟ್ಟಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಡಿ. ಮೋಹನ್ ನಿಯೋಜನೆ ಮೇರೆಗೆ ಬೇರೆ ಕಡೆ ಕಾರ್ಯನಿರ್ವಹಿಸುತ್ತಿದ್ದು, ಮೂಲಸ್ಥಳಕ್ಕೆ ಹಾಕುವಂತೆ ತಿಳಿಸಲಾಗುವುದು.
- ಡಾ. ಜಯರಾಜ,
ಪಶು ವೈದ್ಯಕೀಯ ಇಲಾಖೆ ಜಿಲ್ಲಾ ಉಪ ನಿರ್ದೇಶಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement