ಕಾಯಕಲ್ಪಕ್ಕೆ ಕಾದ ನಾರಾಯಣಪುರ ಚವಡಿಕೆರೆ
ಕನ್ನಡಪ್ರಭ ವಾರ್ತೆ, ಗದಗ, ಮೇ 27
ಗದಗ ತಾಲೂಕಿನ ಕೋಟುಮಚಗಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ನಾರಾಯಣಪುರ ಗ್ರಾಮದಲ್ಲಿರುವ ಚವಡಿ ಕೆರೆ ಹಲವು ವರ್ಷಗಳಿಂದ ಕಾಯಕಲ್ಪ ಕಾಣದೇ ಇಂದು ಅವನತಿ ಹಾದಿ ಹಿಡಿದಿದ್ದು, ಮಳೆಗಾಲ ಪ್ರಾರಂಭವಾಗಿದ್ದರೂ ಇಲ್ಲಿನ ಗ್ರಾಪಂ ಆಡಳಿತ, ಜನಪ್ರತಿನಿಧಿಗಳು ಕೆರೆ ದುರಸ್ಥಿ ಕಾರ್ಯಕ್ಕೆ ಕೈ ಹಾಕದಿರುವುದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮಕ್ಕೆ ಒಂದೇ ಕೆರೆ: ನಾರಾಯಣಪುರ ಗ್ರಾಮ ಕೋಟುಮಚಗಿ ಗ್ರಾಪಂ ವ್ಯಾಪ್ತಿಗೆ ಒಳಪಡುತ್ತದೆ. ಗ್ರಾಮದಲ್ಲಿ ಮೂವರು ಗ್ರಾಪಂ ಸದಸ್ಯರಿದ್ದರೂ ಕೆರೆ ದುರಸ್ತಿ ಕಾರ್ಯ ನಡೆದಿಲ್ಲ. ಗ್ರಾಮದಲ್ಲಿರುವ ಜನರಿಗೆ ಕುಡಿಯಲು ಇರುವುದು ಇದೊಂದೇ ಕೆರೆ. ಆದರೆ ಕೆರೆ ತುಂಬೆಲ್ಲ ಸಂಪೂರ್ಣ ಜಾಲಿ ಕಂಟಿಗಳು ಆವರಿಸಿರುವುದರಿಂದ ಜನರು ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ.
ರು. 22 ಲಕ್ಷದಲ್ಲಿ ಜೀರ್ಣೋದ್ಧಾರ: ಚವಡಿಕೆರೆಯನ್ನು 2011-12ನೇ ಸಾಲಿನಲ್ಲಿ ರು. 22 ಲಕ್ಷ ಅನುದಾನದಡಿ ಕೆರೆಗಳ ಜೀರ್ಣೋದ್ಧಾರಗೊಳಿಸಿದೆ. ಆದರೆ, 2011-12ರಿಂದ ಇಲ್ಲಿವರೆಗೂ ಚವಡಿಕೆರೆ ದುರಸ್ಥಿ ಕಾರ್ಯ ಕೈಗೊಳ್ಳದಿರುವುದರಿಂದ ಇಂದು ಕೆರೆ ತುಂಬಾ ಜಾಲಿ ಕಂಟಿಗಳು ಬೆಳೆದು ಸಂಪೂರ್ಣ ಹಾಳಾಗಿದೆ.
ಕೆರೆಗೆ ತೆರಳಲು ರಸ್ತೆಯಿಲ್ಲ: ಗ್ರಾಮಕ್ಕೆ ಹೊಂದಿಕೊಂಡಿರುವ ಚವಡಿಕೆರೆ ನೀರನ್ನೇ ನಾರಾಯಣಪುರ ಗ್ರಾಮಸ್ಥರು ಅವಲಂಬಿಸಿದ್ದಾರೆ. ಆದರೆ, ಕೆರೆಗೆ ತೆರೆಳುವ ರಸ್ತೆಯುದ್ದಕ್ಕೂ ಜಾಲಿ ಕಂಟಿಗಳು ಬೆಳೆದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೆರೆಗೆ ತೆರೆಳದಂತಹ ಸ್ಥಿತಿ ನಿರ್ಮಾಣವಾಗಿದೆ. ಕೆರೆಯಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ನಿಂತಿವೆಯಾದರೂ ಈ ನೀರು ತರಲಾರದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಕಳೆದು ಮಳೆಗಾಲ ಪ್ರಾರಂಭವಾಗಿದೆ. ಕೆರೆಯಲ್ಲಿ ಬೆಳೆದಿರುವ ಜಾಲಿ ಕಂಟಿ ತೆಗೆದು ಹಾಕಿ ದುರಸ್ಥಿಗೊಳಿಸಬೇಕಾಗಿತ್ತು. ಆದರೆ, ಈ ಕಾರ್ಯ ನಡೆಯದೇ ಕೆರೆ ಸಂಪೂರ್ಣ ಹಾಳಾಗಿದ್ದು, ಮಳೆ ಬಂದು ನೀರು ಸಂಗ್ರಹವಾದರೂ ಜನತೆ ಕೆರೆಗೆ ತೆರಳಿ ನೀರು ತೆಗೆದುಕೊಳ್ಳದಂಥ ಸ್ಥಿತಿ ನಿರ್ಮಾಣವಾಗುತ್ತದೆ.
ನಾರಾಯಣಪುರ ಗ್ರಾಮದಲ್ಲಿರುವ ಚವಡಿಕೆರೆಯಲ್ಲಿ ಮುಳ್ಳು-ಕಂಟಿಗಳು ಬೆಳೆದು ಕೆರೆಯ ಸೌಂದರ್ಯ ಹಾಳಾಗಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು 4 ತಿಂಗಳ ಹಿಂದೆ ಜರುಗಿದ ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಪಿಡಿಒಗೆ ತಿಳಿಸಿದ್ದೇನೆ. ನಂತರದ ದಿನಗಳಲ್ಲಿ ಗ್ರಾಪಂ ಸಭೆಗಳು ನಡೆಯದಿರುವುದರಿಂದ ಈ ವಿಷಯ ಇಲ್ಲಿಗೆ ನಿಂತಿದೆ. ಬರುವ ದಿನಗಳಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಿ ಕೆರೆ ಪುನಶ್ಚೇತನಗೊಳಿಸಲು ಸೂಚಿಸಲಾಗುವುದು.
- ರಾಜೇಸಾಬ ನದಾಫ್,
ನಾರಾಯಣಪುರದ 6ನೇ ವಾರ್ಡ್ ಗ್ರಾಪಂ ಸದಸ್ಯ
-ವಿಶೇಷ ವರದಿ