ಹುಲಕೋಟಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು
ಗದಗ: ತಾಲೂಕಿನ ಹುಲಕೋಟಿ ರೈಲು ನಿಲ್ದಾಣದ ಬಳಿ ಮಂಗಳವಾರ ಸಂಜೆ ಗೂಡ್ಸ್ ರೈಲೊಂದು ಹಳಿ ತಪ್ಪಿದೆ.
ಗದಗದಿಂದ ಹುಬ್ಬಳ್ಳಿ ಕಡೆಗೆ ಸಂಜೆ 5ರ ಸುಮಾರಿಗೆ ಗೂಡ್ಸ್ ರೈಲು ಹೊರಟಿತ್ತು. ಹುಲಕೋಟಿ ರೈಲು ನಿಲ್ದಾಣದ ಬಳಿ ರೈಲಿನ ಒಂದು ಬೋಗಿಯ 2 ಗಾಲಿಗಳು ಹಳಿ ತಪ್ಪಿದೆ. ಚಾಲಕರು ಸಮಯಪ್ರಜ್ಞೆಯಿಂದ ರೈಲನ್ನು ನಿಲ್ಲಿಸಿ, ಸಂಭವನೀಯ ಅಪಘಾತ ತಪ್ಪಿಸಿದ್ದಾರೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಹಳಿ ತಪ್ಪಲು ಕಾರಣ ತಿಳಿದು ಬಂದಿಲ್ಲ. ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದ್ದದಿಂದ ಉಳಿದ ರೈಲುಗಳ ಸಂಚಾರಕ್ಕೆ ಯಾವುದೇ ತೊಂದರೆ ಆಗಲಿಲ್ಲ. ಸ್ಥಳೀಯ ರೇಲ್ವೆ ಕಾರ್ಮಿಕರು ತಕ್ಷಣ ಸ್ಥಳಕ್ಕೆ ಧಾವಿಸಿ, ಕೇವಲ 5ರಿಂದ 10 ನಿಮಿಷಗಳಲ್ಲಿ ಸರಿಪಡಿಸಿ, ಉಳಿದ ರೈಲುಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರೆಂದು ಗದಗ ರೇಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.