ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗಾಳಿ, ಆಲಿಕಲ್ಲು ಮಳೆಗೆಸಾವಿರಾರು ಕೋಳಿ ಬಲಿ

Vishwanath S
Updated On : 30 May 2014, 11:29 am

ಶಿರಹಟ್ಟಿ: ಬುಧವಾರ ಸಂಜೆ ದಿಢೀರನೇ ಸುರಿದ ಭಾರೀ ಬಿರುಗಾಳಿ, ಗುಡುಗು-ಮಿಂಚು ಸಹಿತ ಆಲಿಕಲ್ಲು ಮಳೆಯಿಂದ ತಾಲೂಕಿನ ಜಲ್ಲಿಗೇರಿ, ಕಡಕೋಳ ಗ್ರಾಮಗಳ ಮಧ್ಯ ಕೋಳಿ ಸಾಕಾಣಿಕೆಗೆ ಹಾಕಲಾಗಿದ್ದ ಶೆಡ್ನ ತಗಡುಗಳು ಬಿರುಗಾಳಿಗೆ 200 ಮೀಟರ್ ದೂರ ಹಾರಿ ಹೋಗಿ ಲಕ್ಷಾಂತರ ಹಾನಿ ಉಂಟಾಗಿದೆ.
ಒಂದು ವರ್ಷದ ಹಿಂದೆಯೇ ಮಂಡ್ಯದಿಂದ ಲಕ್ಷಾಂತರ ರು. ನೀಡಿ 4,500 ಕೋಳಿ ಮರಿಗಳನ್ನು ಖರೀದಿಸಿ ಸಾಕಾಣಿಕೆ ಮಾಡುವ ಕಾರ್ಯದಲ್ಲಿ ತೊಡಗಿದ್ದ ಕೃಷ್ಣಾ ಲಕ್ಷ್ಮಣ ಲಮಾಣಿ ಮಾರಾಟ ಮಾಡುವ ಹಂತದಲ್ಲಿದ್ದ ಕೋಳಿಗಳು ಒಮ್ಮಿಂದೊಮ್ಮೆಲೆ ಸುರಿದ ಭಾರೀ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಸಿಲುಕಿ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಕೋಳಿ ಸಾಕಾಣಿಕೆಯ ಶೆಡ್ ನೆಲಸಮವಾಗಿದೆ.
ಕತ್ತಲಲ್ಲಿ ಹಾರಿ ಹೋದ ಕೋಳಿಗಳು: ವಾರ್ಷಿಕ ರು. 20 ಸಾವಿರ ಬಾಡಿಗೆ ನೀಡಿ ಜಲ್ಲಿಗೇರಿ ಗ್ರಾಮದ ಹೊರವಲಯದ ರೈತರ ಹೊಲದಲ್ಲಿ ಕೋಳಿ ಪಾರ್ಮ ಮಾಡಿದ್ದು, ಏಕಾ ಏಕಿ ಭಾರೀ ಬಿರುಗಾಳಿ ಮತ್ತು ಮಳೆ ಹೊಡೆತಕ್ಕೆ ಕತ್ತಲಲ್ಲಿ ಕೋಳಿಗಳು ಚಲ್ಲಾಪಿಲ್ಲಿಯಾಗಿ ಹಾರಿ ಹೋಗಿ ಸತ್ತು ಬಿದ್ದಿವೆ. ನೀರಿನ ಸೆಳೆತಕ್ಕೆ ನೂರಾರು ಕೋಳಿಗಳು ತೇಲಿ ಹೋಗಿವೆ. ಶೆಡ್ ಪಕ್ಕದಲ್ಲಿಯೇ ಇರುವ ಹಾಳು ಬಾವಿ, ಹಳ್ಳ ಮತ್ತು ಮುಳ್ಳು ಕಂಟಿಯಲ್ಲಿಯೂ ಬಿದ್ದು ಕೋಳಿ ಸಾವನ್ನಪ್ಪಿವೆ. ಕೋಳಿ ಫಾರ್ಮ್ ಪಕ್ಕದಲ್ಲಿಯೇ ಇರುವ ಮಲಕಾಜಪ್ಪ ಹುಚ್ಚಪ್ಪ ಬಾಗೇವಾಡಿ ಎಂಬ ರೈತರ ಒಂದು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಸುಗಂಧಿ ಹೂ ಬೆಳೆಗೆ ತಗಡಿನ ಶೆಡ್ ಹಾರಿ ಹೋಗಿ ಬಿದ್ದಿದ್ದು, ಬೆಳೆ ನಾಶವಾಗಿದೆ. ನಿತ್ಯ ರು. 500ಕ್ಕೂ ಹೆಚ್ಚು ಉತ್ಪಾದನೆ ತೆಗೆಯುತ್ತಿದ್ದ ರೈತ ಸದ್ಯ ಸಂಭವಿಸಿದ ನಷ್ಟಕ್ಕೆ ಹೌಹಾರಿದ್ದು, ಸುಗಂಧಿ ಹೂ ಗಿಡಗಳು ಗಾಳಿ ಹೊಡೆತಕ್ಕೆ ನೆಲಕ್ಕುರುಳಿ ಸಂಪೂರ್ಣ ನಾಶವಾಗಿದೆ.
ಬಾಳೆ ಬೆಳೆ ನೆಲಸಮ: ತಾಲೂಕಿನ ಕಡಕೋಳ, ಹೊಸಳ್ಳಿ ಹಾಗೂ ತೆಗ್ಗಿನಭಾವನೂರ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬಾಳೆ ಬೆಳೆ ನೆಲಕ್ಕುರುಳಿದ್ದು, ಹಾನಿಯುಂಟಾಗಿದೆ ಎಂದು ರೈತರಾದ ಶಿವಾನಂದ ಬೆಂತೂರ, ನಿಂಗಪ್ಪ ಮಾಚೇನಹಳ್ಳಿ, ಮಲ್ಲಪ್ಪ ಗೌಳಿ ಎಂಬ ರೈತರು ತಿಳಿಸಿದ್ದು, ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಅಲ್ಲಲ್ಲಿ ಮನೆ ಕುಸಿದಿವೆ. ಮನೆ ಮೇಲ್ಛಾವಣಿ ತಗಡುಗಳು ಗಾಳಿಗೆ ಜಾರಿ ಹೋಗಿ ನಷ್ಟ ಉಂಟಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement