ಜಿಪಂ ಅಧ್ಯಕ್ಷರಾಗಿ ಶಾಂತವ್ವ ದಂಡಿನ
ಗದಗ: ಜಿಪಂ 20 ತಿಂಗಳ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಗುರುವಾರ ಚುನಾವಣೆ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ಕೊಣ್ಣೂರ ಜಿಪಂ ಕ್ಷೇತ್ರದ ಶಾಂತವ್ವ ದಂಡಿನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹೆಬ್ಬಾಳ ಕ್ಷೇತ್ರವನ್ನು ಪ್ರತಿನಿಧಿಸುವ ಸುನಿತಾ ಹಳ್ಳೆಪ್ಪನವರ ಇಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು. ಚುನಾವಣಾಧಿಕಾರಿಯಾಗಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತ ವಿ.ಬಿ. ಪಾಟೀಲ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಜಿಪಂ ಸಿಇಓ ವೀರಣ್ಣ ತುರಮರಿ, ಅಪರ ಜಿಲ್ಲಾಧಿಕಾರಿ ನಾಗರಾಜ, ಉಪವಿಭಾಗಾಧಿಕಾರಿ ಐ.ಜೆ. ಗದ್ಯಾಳ, ಅಧಿಕಾರಿಗಳು ಇದ್ದರು. ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ನಂತರ ಅಧ್ಯಕ್ಷರ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕಳಕಪ್ಪ ಬಂಡಿ, ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ, ನಿಮಗೆ ಸಿಕ್ಕಿರುವ ಅವಕಾಶವನ್ನು ಜನರ ಸಮಸ್ಯೆಗಳನ್ನು ಹೋಗಲಾಡಿಸಲು ಶ್ರಮಿಸಿರಿ, ಗ್ರಾಮೀಣಾಭಿವೃದ್ದಿ ಸಚಿವರ ತವರು ಜಿಲ್ಲೆಯಾಗಿರುವ ಗದಗ ಜಿಲ್ಲೆಯನ್ನು ಅವರ ಸಹಕಾರದಲ್ಲಿ ಮಾದರಿಯ ಜಿಲ್ಲೆಯನ್ನಾಗಿ ರೂಪಿಸುವಲ್ಲಿ ನೀವೆಲ್ಲಾ ಶ್ರಮಿಸಿರಿ ಎಂದರು. ಮಾಜಿ ಸಚಿವ ಸಿ.ಸಿ. ಪಾಟೀಲ, ಜಿಪಂ ಸದಸ್ಯರಾದ ಎಂ.ಎಸ್. ಪಾಟೀಲ, ಹೇಮಗಿರೀಶ ಹಾವಿನಾಳ, ಬೀರಪ್ಪ ಬಂಡಿ, ರಮೇಶ ಮುಂದಿನಮನಿ, ಬಸವರಾಜೇಶ್ವರಿ ಪಾಟೀಲ, ಚಂಬವ್ವ ಪಾಟೀಲ, ಮುಖಂಡರಾದ ಎಂ.ಎಸ್. ಕರಿಗೌಡ್ರ, ಸಣ್ಣವೀರಪ್ಪ ಹಳ್ಳೆಪ್ಪನವರ, ಚಂದ್ರು ದಂಡಿನ ಹಾಜರಿದ್ದರು.
ಅಭಿವೃದ್ದಿಗೆ ಆದ್ಯತೆ
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಂತವ್ವ ದಂಡಿನ ಪಕ್ಷದ ಹಿರಿಯರು ಹಾಗೂ ಎಲ್ಲಾ ಜಿಪಂ ಸದಸ್ಯರನ್ನು ಅಭಿನಂದಿಸಿದ ಅವರು, ಆಡಳಿತ ಮತ್ತು ವಿರೋಧ ಪಕ್ಷದವರ ಮಾರ್ಗದರ್ಶನದ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಒತ್ತು ನೀಡುತ್ತೇನೆ. ಜಿಲ್ಲೆಯಲ್ಲಿರುವ ಕುಡಿವ ನೀರಿನ ಸಮಸ್ಯೆ ಹಾಗೂ ಗ್ರಾಮೀಣ ರಸ್ತೆಗಳ ದುರಸ್ತಿಗೆ ಮೊದಲ ಆದ್ಯತೆ ನೀಡುವ ಮೂಲಕ ಜಿಲ್ಲೆಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ. ಈ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರವನ್ನು ಕೋರುತ್ತೇನೆ ಎಂದರು.
ಉಪಾಧ್ಯಕ್ಷೆ ಸುನೀತಾ ಹಳ್ಳೆಪ್ಪನವರ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಪಕ್ಷ ನಮಗೆ ಅಧಿಕಾರ ನೀಡಿದ್ದು, ಅವರು ನೀಡಿದ ಅವಕಾಶವನ್ನು ಜಿಲ್ಲೆಯ ಬೆಳವಣಿಗೆಗೆ ಅರ್ಪಿಸಿ ಕೆಲಸ ಮಾಡುತ್ತೇವೆ. ಜಿಪಂ ಎಲ್ಲಾ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಲ್ಲಿ ಜಿಲ್ಲೆಯನ್ನು ಹೊಸ ದಿಕ್ಕಿನತ್ತ ಸಾಗುವಂತೆ ಅಗತ್ಯ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ ಎಂದರು.