ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ
ಕನ್ನಡಪ್ರಭ ವಾರ್ತೆ, ಗದಗ, ಮೇ 30
ಕೋಮುವಾದಿ ಶಕ್ತಿಗಳು ದೇಶದಲ್ಲಿ ಅಶಾಂತಿ ಉಂಟು ಮಾಡುವುದಲ್ಲದೆ ಜಾತಿ ತಾರತಮ್ಯದ ವಿಷ ಬೀಜ ಬಿತ್ತುವುದು, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ದೇಶವನ್ನು ಒಡೆದು ಆಳುವ ನೀತಿಯನ್ನು ಜಾರಿಗೆ ತರುತ್ತಿವೆ. ಅಂತಹ ಜಾತಿವಾದಿಗಳ ಮತ್ತು ಕೋಮುವಾದಿಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ವೆಂಕಟೇಶಯ್ಯ ಹೇಳಿದರು.
ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಸ್ಲಂ ಯುವ ಘಟಕ ಮತ್ತು ದಲಿತ ಸಂಘರ್ಷ ಸಮಿತಿಯ ಆಶ್ರಯದಲ್ಲಿ ಸಮಿತಿಯ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿದ ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ 79ನೇ ಮಹಾಪರಿನಿರ್ವಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಮಾಬಾಯಿ ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಬರೆದುಕೊಟ್ಟ ಬಾಬಾ ಸಾಹೇಬ ಅಂಬೇಡ್ಕರ್ ಅವರ ಧರ್ಮಪತ್ನಿಯಾಗಿ, ಅಂಬೇಡ್ಕರ್ ಅವರ ಹೆಜ್ಜೆ ಹೆಜ್ಜೆಗೆ ಕೂಡ ಅವರ ಹೋರಾಟಗಳಿಗೆ ಮತ್ತು ಅವರ ಚಿಂತನೆಗಳಿಗೆ ಎಲೆ ಮರೆಕಾಯಿಯಂತೆ ಪ್ರೋತ್ಸಾಹ ನೀಡುತ್ತ ಸಹಕಾರಿಯಾಗಿ ದುಡಿದಿದ್ದಾರೆ. ರಮಾಬಾಯಿ ಕೂಡ ಸಮಾನತೆ ಬಯಸಿದ್ದವರು. ಇಂತಹ ವಿಷಯಗಳನ್ನು ಮುಂದಾಳತ್ವದಲ್ಲಿ ತೆಗೆದುಕೊಂಡು ಹೊರಟಿರುವ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಯಾವುದೇ ರೀತಿಯ ಅಡೆತಡೆಗಳನ್ನು ಒಡ್ಡದೆ ಶ್ರಮವಹಿಸಿ ದುಡಿದ ಅವರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಇಂದು ಹುಟ್ಟಿಕೊಂಡಿರುವ ಸಂವಿಧಾನ ವಿರೋಧಿಗಳಾದ ಕೋಮುವಾದಿಗಳು, ಜಾತಿವಾದಿಗಳ ವಿರುದ್ಧ ನಾವು ನಿರಂತರ ಹೋರಾಟ ಮಾಡುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಆರ್.ಎಲ್. ಹಂಸನೂರ ಮಾತನಾಡಿ, ಅಂಬೇಡ್ಕರ್ ಇಡೀ ಜಗತ್ತಿಗೆ ಬೆಳಕಾಗಿ ನಿಂತು ಎಲ್ಲರೂ ಹುಬ್ಬೇರುಸುವ ಹಾಗೆ ಈ ದೇಶಕ್ಕೆ ಸರಿಸಮಾನವಾದಂತಹ ಸಂವಿಧಾನವನ್ನು ಬರೆದುಕೊಟ್ಟಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಜತೆ 39 ವರ್ಷ ಸಂಸಾರ ನಡೆಸಿದ್ದ ರಮಾಬಾಯಿ ಅಂಬೇಡ್ಕರ್ ಅವರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಅವರ ಪ್ರಯತ್ನಕ್ಕೆ ಸಹಕಾರಿಯಾಗಿ ದುಡಿದವರು ಎಂದರು.
ಸ್ಲಂ ಸಮಿತಿಯ ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ, ಸ್ಲಂ ಯುವ ಸಮಿತಿ ಅಧ್ಯಕ್ಷ ಶರೀಫ ಬಿಳೆಯಲಿ, ಉಮಾದೇವಿ ಕಾತರಕಿ, ತಿಪ್ಪವ್ವ ಮುಟಗಾರ, ಯಲ್ಲಪ್ಪ ರಾಮಗಿರಿ, ಪರಶುರಾಮ ಕಾಳೆ, ಅನಿಲ ಕಾಳೆ, ರಾಜು ಕಣಗಿನಹಾಳ, ನಾಗರಾಜ ಮುಟಗಾರ, ಯುಸೂಫ್ ಮಜ್ಜಗಿ, ಮಲ್ಲಿಕಾರ್ಜುನ ಬಣಕಾರ, ಅಬೂಬಕರ ಮಕಾನದಾರ, ಕಾಶಪ್ಪ ಚಲವಾದಿ, ಬಸವರಾಜ ಬಿಳೆಯಲಿ, ರಾಜು ಡಿ. ಭರಮಣ್ಣವರ ಇದ್ದರು. ಪರಶುರಾಮ ಕಾಳೆ ನಿರೂಪಿಸಿದರು. ಅನಿಲ ಕಾಳೆ ವಂದಿಸಿದರು.
--