ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
ಕ.ಪ್ರ.ವಾರ್ತೆ ಹಾಸನ ಆ. 22
ಕಲಿಯುಗ ಕಲ್ಪತರು, ರಾಘವೇಂದ್ರ ಸ್ವಾಮಿಗಳ 342ನೇ ಆರಾಧನಾ ಮಹೋತ್ಸವವನ್ನು ಗುರುವಾರ ಹಾಸನ ಸೇರಿದಂತೆ ಜಿಲ್ಲೆಯ ಹಲವೆಡೆ ನಾನಾ ರಾಘವೇಂದ್ರಸ್ವಾಮಿ ಮಠಗಳಲ್ಲಿ ಶ್ರದ್ಧಾಭಕ್ತಿಯಿಂದ ವೈಭವದಿಂದ ಆಚರಿಸಲಾಯಿತು. ಅಸಂಖ್ಯ ಭಕ್ತರು ರಾಯರ ಮಠಕ್ಕೆ ತೆರಳಿ ಶ್ರೀಗಳ ಬೃಂದಾವನ ದರ್ಶನ ಪಡೆದು ಪುನೀತರಾದರು.
ಶ್ರೀಗುರುರಾಘವೇಂದ್ರ ಸ್ವಾಮಿ ಸೇವಾ ಸಮಿತಿ ವತಿಯಿಂದ ನಗರದ ರವೀಂದ್ರನಗರದ ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ, ಅಲಂಕಾರ, ಅನ್ನಸಂತರ್ಪಣೆ, ಉತ್ಸವಾದಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಚಾರ್ಯ ರತ್ನ ಚಿತ್ರಾಪುರ ಗೋಪಾಲಕೃಷ್ಣಚಾರ್ ನೇತೃತ್ವದಲ್ಲಿ ನಡೆಯಿತು.
ರಾಯರ ಭಕ್ತರು ಬೆಳಗ್ಗೆ ಬೇಗನೇ ಮಠಕ್ಕೆ ರಾಯರ ದರ್ಶನ ಪಡೆದು ಪುನೀತರಾದರು. ಶ್ರೀಗಳ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತು ಬೃಂದಾವನ ದರ್ಶನ ಪಡೆದು ಧನ್ಯರಾದರು. ಬೆಳಗಿನಿಂದಲೇ ರಾಘವೇಂದ್ರ ಸ್ವಾಮಿ ಮಠಗಳಲ್ಲಿ ವಿಶೇಷ ಅಲಂಕಾರ, ಪೂಜೆ, ನಾನಾ ಅಭಿಷೇಕಗಳು ನಡೆದವು. ಭಜನೆ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮಂತ್ರಾಲಯದಿಂದ ಪಾದಯಾತ್ರೆಯಲ್ಲಿ ಶ್ರೀರಾಘವೇಂದ್ರ ಗುರುಗಳ ಮೂಲ ಬೃಂದಾವನದಿಂದ ತಂದ ಪವಿತ್ರ ಮೃತ್ತಿಕೆಯನ್ನು ಶ್ರೀರಾಮ ಮತ್ತು ರಾಮ ಬಳಗದೊಂದಿಗೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರು ಇಲ್ಲಿ ಬೃಂದಾವನ ಪ್ರತಿಷ್ಠಾಪನೆ ಮಾಡಿದ್ದು, ಅಂದಿನಿಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಿತ್ಯ ಪೂಜಾದಿಗಳು, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಜನೋಪಕಾರಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಆ.21ರಿಂದ 23ರವರೆಗೆ ರಾಘವೇಂದ್ರ ಗುರುಗಳ 342ನೇ ಆರಾಧನಾ ಉತ್ಸವ ನಡೆಯಲಿದೆ. 22ರಂದು ಉಪ:ಕಾಲ ಪೂಜೆ, ಅಭಿಷೇಕ ಓಂ ಶ್ರೀ ರಾಘವೇಂದ್ರಾಯ ನಮ: ಅಷ್ಟಾಕ್ಷರ ಜಪ ಪುನಶ್ಚರಣೆ, ಮಹಾಪೂಜೆ ನೆರವೇರಿತು. ನಂತರ ಮಧ್ಯಾಹ್ನ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಸಂಜೆ 5ರಿಂದ ಭಜನಾ ಕಾರ್ಯಕ್ರಮ ನಂತರ, 6.15ಕ್ಕೆ ಸಂಗೀತ ವಿದುಷಿ ತ್ರಿವೇಣಿ ವೆಂಕಟರಾಮ್ ಹಾಗೂ ಕವಿತಾ ಸರಳಾಯ ಅವರಿಂದ ದ್ವಂದ್ವ ಗಾಯನ ನಡೆಯಿತು. ಯಶಸ್ವಿ ಅವರಿಂದ ಪಿಟೀಲು, ಸೋಮಶೇಖರ್ ಘಟಂ ಮತ್ತು ಆನೂರು ಎಸ್.ವಿನೋದಶ್ಯಾಮು ಮೃದಂಗ ನುಡಿಸಿದರು.
ಆ.23ರಂದು ಬೆಳಗ್ಗೆ 6.30ಕ್ಕೆ ಉಷ: ಕಾಲದಲ್ಲಿ ವಿಶೋಷ ಪೂಜೆ, ಎಳೆನೀರು ಅಭಿಷೇಕ, ಅಷ್ಟೋತ್ತರ, ಅಲಂಕಾರ, ಮಹಾಪೂಜೆ, ಬೆಳಗ್ಗೆ 9ರಿಂದ ಮಠದ ಸುತ್ತಲೂ ಅಲಂಕೃತ ರಥದಲ್ಲಿ ವೇದಘೋಷ, ಭಜನೆ, ವಾದ್ಯಮೇಳಗಳೊಡನೆ ಶ್ರೀರಾಯರ ಪ್ರಥಮ ಅವತಾರವಾದ ಶ್ರೀಪ್ರಹ್ಲಾದರಾಯರ ದಿವ್ಯ ರಥೋತ್ಸವ ನಡೆಯಲಿದೆ. ನಂತರ ಶ್ರೀಗುರುರಾಜ ಭಜನ ಮಂಡಳಿಯವರಿಂದ ಸ್ವರ್ಣ ಮಹೋತ್ಸವ ಸಲುವಾಗಿ ಭಕ್ತರಿಂದ ಬಂದಿರುವ ಓಂ ಶ್ರೀರಾಘವೇಂದ್ರಾಯ ನಮ: ಲೇಖನ ಯಜ್ಞ ಪುಸ್ತಕಗಳನ್ನು ರಥದಲ್ಲಿ ಇರಿಸಲಾಗುತ್ತದೆ.
ಸಂಜೆ 6ರಿಂದ ಭಕ್ತಿಗಾಯನ ಪ್ರಸಿದ್ಧ ಸಂಗೀತ ಶಿರೋಮಣಿ ವಿದ್ಯಾಭೂಷಣರು ಮತ್ತು ವೃಂದದವರಿಂದ ನಡೆಯಲಿದೆ. ಭಕ್ತಾಧಿಗಳು ಆರಾಧನೆಗೆ ಧನ ಧಾನ್ಯ, ಹಾಲು, ಮೊಸರು, ಎಳನೀರು, ಜೇನುತಪ್ಪ ಹಾಗೂ ಅಲಂಕಾರಕ್ಕೆ ತುಳಸಿ, ದೊಡ್ಡ ಹೂವಿನ ಹಾರಗಳನ್ನು ಸೇವಾರ್ಥ ನೀಡಿದರು. ಕೆಲವರು ನಗದು ರೂಪದಲ್ಲಿ ಸೇವಾರ್ಥ ಸಲ್ಲಿಸಿ ರಾಯರ ಕೃಪೆಗೆ ಪಾತ್ರರಾದರು.
ಉತ್ತರ ಬಡಾವಣೆಯಲ್ಲಿ: ಶ್ರೀಮದಾನಂದತೀರ್ಥ ಸೇವಾ ಟ್ರಸ್ಟ್ ವತಿಯಿಂದ ಉತ್ತರ ಬಡಾವಣೆಯಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ 342ನೇ ಆರಾಧನಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿಲಾಯಿತು. ಟ್ರಸ್ಟ್ ವತಿಯಿಂದ ಶ್ರೀ ಕಡಗೋಲು ಕೃಷ್ಣ, ಶ್ರೀಮುಖ್ಯ ಪ್ರಾಣದೇವರು (ಆಂಜನೇಯಸ್ವಾಮಿ) ದೇವಸ್ಥಾನದಲ್ಲಿ ಶ್ರೀರಾಘವೇಂದ್ರ ಗುರುಸಾವಭೌಮರ ಆರಾಧನೆಯ ಅಂಗವಾಗಿ ಸ್ವಾಮಿಗೆ ವಿಶೇಷವಾಗಿ ಹೂವಿನ ಆಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ದೇವರಿಗೆ ವಿಶೇಷ ನಾನಾ ಅಭಿಷೇಕಗಳು, ಅಲಂಕಾರಗಳು, ವಿಶೇಷ ಪೂಜೆಗಳನ್ನು ಶ್ರದ್ಧಾಭಕ್ತಿಯಿಂದ ನೆರೆವೇರಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಮಾಡಿದರು. ಭಕ್ತಾದಿಗಳು ದ್ರವ್ಯ ಅಥವಾ ವಸ್ತುಗಳನ್ನು ಧಾನ್ಯ ರೂಪದಲ್ಲಿ ಸಲ್ಲಿಸಿ ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಬಾಲಗೋಪಾಲ ಭಜನಾ ಮಂಡಳಿಯವರಿಂದ 'ಕಂಬದಿಂದ ಮೂಡಿಬಂದ ನರಸಿಂಹ' ವಿಶೇಷ ರೂಪಕ ನಡೆಸಲಾಯಿತು. ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ನ ಕೆ.ಎಸ್.ಕೃಷ್ಣಮೂರ್ತಿ, ವಿಜಯೇಂದ್ರರಾವ್, ಜಯತೀರ್ಥ, ಪಾಂಡುರಂಗ, ಶೇಷಾದ್ರಿ, ನಾಗರಾಜ್, ಆನಂದಕುಮಾರ್, ಲಕ್ಷ್ಮಿಕಾಂತರಾವ್, ನರಹರಿ, ವಾಸುದೇವ್, ಅನಂತಮೂರ್ತಿ ಇತರರು ಇದ್ದರು.
ಹೊಳೆನರಸೀಪುರದಲ್ಲಿ ವೈಭವದ ಶ್ರೀ ರಾಘವೇಂದ್ರರ ರಥೋತ್ಸವ
ಕ.ಪ್ರ.ವಾರ್ತೆ ಹೊಳೆನರಸೀಪುರ ಆ. 22
ಪಟ್ಟಣದ ಶ್ರೀ ರಾಘವೇಂದ್ರ ಮಠದಲ್ಲಿ ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವ ಅಸಂಖ್ಯಾ ಭಕ್ತಾಧಿಗಳ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ಜರುಗಿತು. ರಾಯರ ಆರಾಧನಾ ಅಂಗವಾಗಿ ಗುರುಸಾರ್ವಭೌಮರ ರಥೋತ್ಸವವು ಕೋಟೆಯಲ್ಲಿನ ಪ್ರಮುಖ ರಾಜಬೀದಿಗಳಲ್ಲಿ ನಡೆಸಲಾಯಿತು.
ಸರ್ವರನ್ನೂ ಕಾಯುವ ಸಾರ್ವಭೌಮರೆನಿಸಿರುವ ಗುರುರಾಘವೇಂದ್ರರ 342ನೇ ಆರಾಧನಾ ಮಹೋತ್ಸವವನ್ನು ಇಲ್ಲಿನ ರಾಘವೇಂದ್ರ ಮಠದಲ್ಲಿ ಸಕಲ ಭಕ್ತಾಧಿಗಳ ಸಹಕಾರದೊಂದಿಗೆ ಸಂಪ್ರದಾಯೋಕ್ತವಾಗಿ ಪ್ರತಿ ವರ್ಷವೂ ಆಚರಿಸಿಕೊಂಡು ಬರಲಾಗುತ್ತಿದೆ.
ಆರಾಧನಾ ಅಂಗವಾಗಿ, ಮಠದಲ್ಲಿ ಮಂತ್ರಾಲಯ ಪ್ರಭುಗಳಿಗೆ ನಿತ್ಯವೂ ವಿಶೇಷ ಅಭಿಷೇಕ, ಕ್ಷೀರಾಭಿಷೇಕ, ಫಲ ಪಂಚಾಮೃತ ಅಭಿಷೇಕ ಕಾಯಕ್ರಮಗಳು ನಡೆಯುತ್ತಿವೆ. ಮಠದಲ್ಲಿ ಬೃಂದಾವನಕ್ಕೆ ಬೆಳಗಿನಿಂದಲೇ ಶುದ್ಧವಾದ ಗೋವಿನ ಹಾಲು, ತುಪ್ಪ, ಜೇನುತುಪ್ಪ, ಸಕ್ಕರೆ ಮೊದಲಾದುವುಗಳನ್ನು ಬೆರೆಸಿ ಅಭಿಷೇಕ ಮಾಡಲಾಯಿತು.
ಈ ಸಂದರ್ಭದಲ್ಲಿ ಭಕ್ತರು ಅಭಿಷೇಕವನ್ನು ಕಣ್ಣಾರೆ ಕಂಡು ರಾಯರ ಪೂರ್ಣಾನುಗ್ರಹಕ್ಕೆ ಪಾತ್ರರಾಗಿ ಪುನೀತರಾದರು. ನಂತರದಲ್ಲಿ ವಿಧವಿಧವಾದ ಪುಷ್ಪಗಳಿಂದ ಅಲಂಕೃತಗೊಳಿಸಿದ್ದ ರಥದಲ್ಲಿ ರಾಯರ ರಥೋತ್ಸವವು ಕೋಟೆಯಲ್ಲಿನ ನಾಲ್ಕು ಪ್ರಮುಖ ರಾಜಬೀದಿಗಳಲ್ಲಿ ಸಾಗಿತು. ಈ ಸಂದರ್ಭದಲ್ಲಿ ಹೆಜ್ಜೆ ಹೆಜ್ಜೆಗೂ ರಾಯರಿಗೆ ಭಕ್ತಾಧಿಗಳು ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಠದಲ್ಲಿ ಸಾರ್ವಜನಿಕರಿಗೆ ತೀರ್ಥ ಪ್ರಸಾದ ಏರ್ಪಡಿಸಲಾಗಿತ್ತು.