ಒತ್ತಡದ ಬದುಕೇ ರೋಗಕ್ಕೆ ಕಾರಣ: ಚೇತನ್ ಗುರೂಜಿ
ಕ.ಪ್ರ.ವಾರ್ತೆ ಸಕಲೇಶಪುರ ಆ. 22
ಒತ್ತಡದ ಬದುಕೇ ಎಲ್ಲ ರೋಗಗಳಿಗೆ ಮೂಲ ಕಾರಣ ಎಂದು ಯೋಗ ಗುರು ಚೇತನ್ ಗುರೂಜಿ ತಿಳಿಸಿದರು. ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ತಾಲೂಕು ಜಾನಪದ ಪರಿಷತ್, ಲಯನ್ಸ್, ರೋಟರಿ ಹಾಗೂ ತಾಲೂಕು ವಕೀಲರ ಸಂಘದ ಆಶ್ರಯದಲ್ಲಿ 15 ದಿನ ನಡೆದ ಯೋಗಾಸನ, ಪ್ರಾಣಾಯಾಮ, ಧ್ಯಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಜನರು ಚಿಂತನೆ ಬದಲಿಗೆ ಚಿಂತೆ ಮಾಡುವುದು, ಪ್ರೀತಿಯ ಬದಲಿಗೆ ದ್ವೇಷ, ಹಾಸ್ಯ ಪ್ರಜ್ಞೆ ಬದಲಿಗೆ ಒತ್ತಡದ ನಡುವೆ ಜೀವನ ನಡೆಸುತ್ತಿರುವುದೆ ರೋಗಗಳಿಗೆ ಮೂಲ ಕಾರಣವಾಗಿದೆ. ಆದ್ದರಿಂದ ಒತ್ತಡದ ಬದುಕನ್ನು ಸುಂದರ ಮಾಡಿಕೊಳ್ಳಲು ಚಿಂತನೆ, ಹಾಸ್ಯಪ್ರಜ್ಞೆ ಅವಶ್ಯಕ. ಇವುಗಳನ್ನು ಪ್ರಾಣಯಾಮ ಹಾಗೂ ಧ್ಯಾನದಿಂದ ಪಡೆಯಬಹುದಾಗಿದ್ದು ಇದರಿಂದ ಯಾವುದೇ ರೋಗ ಬರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಯೋಗ ಕಲಿಯಲು ವಿದೇಶೀಯರು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಆದರೆ ನಾವೇ ಇದರ ಬಗ್ಗೆ ನಿರಾಸಕ್ತಿ ಹೊಂದಿದ್ದೇವೆ. ಪ್ರತಿಯೊಬ್ಬರೂ ಯೋಗ ಕಲಿತು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಯುವಜನಾಂಗ ಹಾಗೂ ಶಾಲಾ ಮಕ್ಕಳು ನಮ್ಮ ಮಣ್ಣಿಗೆ ಹೊಂದದ ಆಹಾರ ಪದ್ಧತಿ ಮೊರೆಹೋಗಿರುವುದು ರೋಗಗಳ ಉಲ್ಬಣಕ್ಕೆ ಕಾರಣವಾಗಿದೆ. ಆದ್ದರಿಂದ ನೈಸರ್ಗಿಕ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು ಎಂದರು. ವೃತ್ತ ನಿರೀಕ್ಷಕ ದಿನೇಶ್ಪಾಟೀಲ್ ಮಾತನಾಡಿ, ಇಂದಿನ ಯುವ ಜನಾಂಗಕ್ಕೆ ಯೋಗದ ಮಹತ್ವದ ಅರಿವಿನ ಕೊರತೆ ಇರುವುದರಿಂದಾಗಿ ಯುವ ಜನಾಂಗ ಇದರಿಂದ ದೂರವಾಗಿದೆ. ಹಾಗಾಗಿ ಯೋಗ ಕೆಲವೇ ಜನರ ಸ್ವತ್ತಾಗಿದೆ. ಈ ಹಿನ್ನೆಲೆಯಲ್ಲಿ ಯೋಗದ ಬಗ್ಗೆ ಹೆಚ್ಚಿನ ಪ್ರಚಾರದ ಅವಶ್ಯಕತೆ ಇದೆ ಎಂದರು. ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಮೇಘಟವಳ್ಳಿ ಎಂ.ಪಿ.ಹರೀಶ್, ಲಯನ್ಸ್ ಅಧ್ಯಕ್ಷ ನರೇಶ್, ಮಾಜಿ ಅಧ್ಯಕ್ಷ ಸುಳ್ಳಕ್ಕಿ ದಿನೇಶ್, ಚನ್ನವೇಣಿ ಎಂ ಶೆಟ್ಟಿ, ಶಶಿಧರ್, ರವಿಕಿರಣ್, ಸಂಜೀತ್ಶೆಟ್ಟಿ ಇತರರು ಇದ್ದರು.