ನಾಡದೋಣಿ ಮಗುಚಿ 3 ಮೀನುಗಾರರು ಸಾವು
ಕನ್ನಡಪ್ರಭ ವಾತೆ ಹಾಸನ ಆ.22
ಮೀನು ಹಿಡಿಯಲು ಬಲೆ ಬೀಸುವ ವೇಳೆ ಆಕಸ್ಮಿಕವಾಗಿ ನಾಡದೋಣಿ ಮುಳುಗಿ ಮೂವರು ಮೀನುಗಾರರು ಮೃತಪಟ್ಟಿರುವ ದುರ್ಘಟನೆ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯ ಹಿನ್ನೀರಿನಲ್ಲಿ ಗುರುವಾರ ಸಂಜೆ ನಡೆದಿದೆ.
ತಾಲೂಕಿನ ಕಟ್ಟಾಯ ಹೋಬಳಿ ಚೌಡಹಳ್ಳಿ ಗ್ರಾಮದ ಹರೀಶ್ (27), ತ್ರಿವೇಣು (32), ಶಂಕರ್ಕುಮಾರ್ (26) ಮೃತಪಟ್ಟ ಮೀನುಗಾರರು. ಮೂವರು ಎಂದಿನಂತೆ ಸೂರ್ಯ ಮುಳುಗುವ ವೇಳೆ ಮೀನು ಹಿಡಿಯಲು ಬಲೆ ಬೀಸುತ್ತಿದ್ದಾಗ ಬಿದಿರಿನಿಂದ ಮಾಡಿದ್ದ ನಾಡ ದೋಣೆ ಮುಳುಗಿತು. ಈ ಸಂದರ್ಭದಲ್ಲಿ ಮೂವರು ಈಜಿ ದಡ ಸೇರಿ ಪ್ರಾಣ ಉಳಿಸಿಕೊಳ್ಳಲು ಮಾಡಿದ ಯತ್ನ ವಿಫಲವಾಗಿ ಮೃತಪಟ್ಟಿದ್ದಾರೆ. ಮೃತರ ಶವಗಳು ಇನ್ನೂ ಪತ್ತೆಯಾಗಿಲ್ಲ. ಶೋಧ ಕಾರ್ಯ ಮುಂದುವರಿದೆ.
ಮೀನುಗಾರರು ಸಂಜೆ ವೇಳೆ ಜಲಾಶಯದಲ್ಲಿ ಮೀನು ಹಿಡಿಯಲು ಪ್ರತಿ ದಿನ ಬಲೆ ಬೀಸುತ್ತಾರೆ. ಮಾರನೇ ದಿನ ಮುಂಜಾನೆ ಬಲೆಗೆ ಬಿದ್ದಿರುವ ಮೀನುಗಳನ್ನು ಮಾರಾಟ ಮಾಡಲಾಗುತ್ತದೆ. ಜಲಾಶಯದ ಹಿನ್ನೀರಿನಲ್ಲಿ ಮೀನು ಹಿಡಿಯಲು ಗುತ್ತಿಗೆ ಪಡೆದುಕೊಂಡ ವ್ಯಕ್ತಿ ಮೀನುಗಾರರಿಗೆ ಬೇಕಾದ ರಕ್ಷಣಾ ವಸ್ತುಗಳನ್ನು ನೀಡದೆ ಹೋದದ್ದು ಈ ದುರಂತಕ್ಕೆ ಕಾರಣ. ಜಾಕೆಟ್ ಹಾಗೂ ವ್ಯವಸ್ಥಿತವಾಗಿರುವ ನಾಡ ದೋಣಿ ನೀಡಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ ಎಂದು ದೂರಲಾಗಿದೆ.
ಮೀನುಗಾರರಿಗೆ ಹಿಡಿದ ಕೆ.ಜಿ.ಮೀನಿಗೆ 35 ರು. ಗಳಿಗೆ ಪಡೆದುಕೊಳ್ಳುವ ಗುತ್ತಿಗೆದಾರರು 100 ರು. ಮಾರಾಟ ಮಾಡುತ್ತಾರೆ. ಆದರೆ ಮೀನುಗಾರಿಗೆ ಸೂಕ್ತ ರಕ್ಷಣೆ ವ್ಯವಸ್ಥೆ ಮಾಡದೇ ಹೋದ ಬಗ್ಗೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಗೊರೂರು ಠಾಣೆ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದಾರೆ.