ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪತ್ರಿಕೋದ್ಯಮದ ಮೂಲ ತತ್ವ ಅರಿತು ಕರ್ತವ್ಯ: ದಿಲೀಪ್‌ಕುಮಾರ್

Srinivasa Murthy VN
Updated On : 22 Aug 2013, 10:13 am

ಹಾಸನ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಯುವಕರು ಪತ್ರಿಕೋದ್ಯಮದ ಮೂಲ ತತ್ವಗಳನ್ನು ಅರಿತು ಕೆಲಸ ಮಾಡಬೇಕು ಎಂದು ಸರ್ಕಾರಿ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎಚ್.ಕೆ. ದಿಲೀಪ್‌ಕುಮಾರ್ ಹೇಳಿದರು.  ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮ ದಿನಾಚರಣೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಯುವಕರು ಹೆಚ್ಚು ಪ್ರವೇಶ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಯುವಕರು ಆ ಕ್ಷೇತ್ರದ ಮೂಲ ತತ್ವಗಳನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.  ಮುಖ್ಯ ಅತಿಥಿ ಅಧ್ಯಾಪಕ ಆರ್. ರವೀಂದ್ರ ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮ ಕ್ಷೇತ್ರ ಇಂದು ಇತರೆ ಅಂಗಗಳಿಗಿಂತ ಹೆಚ್ಚು ಬಲಿಷ್ಠವಾಗುತ್ತಿದೆ ಹಾಗೂ ಜನರೊಂದಿಗೆ ನಿರಂತರ ಸಂಪರ್ಕ ಹೊಂದುವಲ್ಲಿ ಯಶಸ್ವಿಯಾಗಿದೆ ಎಂದರು. ಅಧ್ಯಾಪಕ ಕೆ.ಆರ್. ಸಂದೇಶ್ ಇತರರು ಇದ್ದರು.

ಪೊಲೀಸರಂತೆ ನಟಿಸಿ ವೃದ್ಧೆಯಿಂದ ರು. 2 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಕ.ಪ್ರ.ವಾರ್ತೆ ಹಾಸನ ಆ. 22

ವೃದ್ಧ ಮಹಿಳೆಯನ್ನು ವಂಚಿಸಿ ಯುವಕರಿಬ್ಬರು ಚಿನ್ನಾಭರಣ ಕಳವು ಮಾಡಿರುವ ಘಟನೆ ನಗರದ ಕುವೆಂಪುನಗರದಲ್ಲಿ ಗುರುವಾರ ನಡೆದಿದೆ.
ನಗರದ ಲಕ್ಷ್ಮಮ್ಮ ಎಂಬವರು ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರಿಬ್ಬರು ಬೈಕ್‌ನಲ್ಲಿ ಬಂದು ಪೊಲೀಸರಂತೆ ನಟಿಸಿ, ವೃದ್ಧ ಮಹಿಳೆಯ ಎದುರಿಗೆ ಬಂದು, ಚಿನ್ನಾಭರಣಗಳನ್ನು ಈ ರೀತಿ ಮೈಮೇಲೆ ಹಾಕಿಕೊಂಡು ಓಡಾಡಬಾರದು. ಚಿನ್ನಾಭರಣಗಳನ್ನು ಬಿಚ್ಚಿಕೊಡಿ ಅದನ್ನು ಭದ್ರವಾಗಿ ಕಟ್ಟಿ ಕೊಡುವುದಾಗಿ ಹೇಳಿ ಚಿನ್ನದ ಸರ ಹಾಗೂ ಎರಡು ಬಳೆಗಳನ್ನು ವೃದ್ಧೆಯಿಂದ ಬಿಚ್ಚಿಸಿಕೊಂಡಿದ್ದಾರೆ.
ನಂತರ ಅವರು ಚಿನ್ನಾಭರಣಗಳನ್ನು ಪೇಪರ್‌ನಲ್ಲಿ ಕಟ್ಟಿ ಕೊಡುವಂತೆ ನಾಟಕವಾಡಿ ಮಹಿಳೆಯ ಸೆರಗಿಗೆ ನಕಲಿ ಆಭರಣಗಳನ್ನು ಕಟ್ಟಿಕೊಟ್ಟು ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಸ್ವಲ್ವ ದೂರ ಹೋಗುತ್ತಿದ್ದಂತೆ ವೃದ್ಧೆ ಲಕ್ಷ್ಮಮ್ಮ ಗಂಟನ್ನು ಬಿಚ್ಚಿ ನೋಡಿದಾಗ ನಕಲಿ ಆಭರಣ ಇದ್ದದ್ದು ಗೊತ್ತಾಗಿದೆ. ಇದರಿಂದ ಕಂಗಾಲಾದ ವೃದ್ಧೆ ನಂತರ ಬಡಾವಣಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಮಾರು ಒಂದುವರೆಯಿಂದ ಎರಡು ಲಕ್ಷ ರು.ಗಳ ವರೆಗಿನ ಆಭರಣ ಕಳವಾಗಿದೆ ಎಂದು ಅಂದಾಜು ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement