ಶೀಘ್ರ ಕಡತ ವಿಲೇವಾರಿ: ಅಧಿಕಾರಿಗಳಿಗೆ ಲೋಕಾಯುಕ್ತ ಡಿವೈಎಸ್ಪಿ ಸೂಚನೆ
ಕ.ಪ್ರ.ವಾರ್ತೆ ಆಲೂರು ಆ. 22
ತಾಲೂಕು ಕಚೇರಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಲೋಕಾಯುಕ್ತ ಡಿವೈಎಸ್ಪಿ ಎಚ್.ಎಂ.ಶಿವರುದ್ರಪ್ಪ ಅಧಿಕಾರಿಗಳಿಗೆ ಸೂಚಿಸಿದರು. ಅವರು ಗುರುವಾರ ತಾಲೂಕು ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿ ಮಾತನಾಡಿದರು.
ಸರ್ವೇ ಇಲಾಖೆಯಲ್ಲಿರುವ ಹದ್ದು ಬಸ್ತು ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿರುವುದರಿಂದಾಗಿ ಹಳ್ಳಿಗಳಲ್ಲಿ ಜಗಳ ಹೊಡೆದಾಟಗಳು ನಡೆಯುತ್ತಿದೆ. ಇದರಿಂದ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಇಲಾಖೆಯವರು ಶೀಘ್ರವಾಗಿ ಬಾಕಿ ಉಳಿದಿರುವ ಎಲ್ಲ ಕಡತಗಳನ್ನು ವಿಲೇವಾರಿ ಮಾಡಬೇಕೆಂದರು.
ತಿದ್ದುಪಡಿ ಅರ್ಜಿಗಳು ಸಹ ಬಹಳಷ್ಟು ಪೆಂಡಿಂಗ್ ಇರುವುದಕ್ಕೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ತಿದ್ದುಪಡಿ ಮಾಡುವ ಕೆಲಸ ಅತ್ಯಂತ ಸುಲಭವಾದುದ್ದಾಗಿದ್ದು, ಈ ಕಾರ್ಯ ಪೂರ್ಣಗೊಳಿಸಲು ಇಷ್ಟೊಂದು ಸಮಯ ಏಕೆ ಬೇಕೆಂದು ಪ್ರಶ್ನಿಸಿದ ಅವರು, ಇದರಿಂದಾಗಿ ರೈತರಿಗೆ ಸರ್ಕಾರದ ಸವಲತ್ತು ಪಡೆಯಲು ವಿನಾ ಕಾರಣ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದರು.
ಹಾಗೂ ಈ ರೀತಿ ಕೆಲಸ ಮಾಡುವುದ್ದಕ್ಕೆ ನಿಮಗೆ ಸರ್ಕಾರ ಸಂಬಳ ನೀಡುತ್ತಿರುವುದೆಂದು ಖಾರವಾಗಿ ಪ್ರಶ್ನಿಸಿದ ಅವರು, ಸರ್ಕಾರಿ ಕಚೇರಿಗಳಲ್ಲಿ ಹಣವಿಲ್ಲದೆ ಯಾವುದೇ ಕೆಲಸವಾಗುವುದಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿದು,್ದ ಇದನ್ನು ತೊಡೆದು ಹಾಕಬೇಕಾದರೆ ತಾವು ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದರೂ ಡೆಪ್ಯೂಟೇಶನ್ ಮೂಲಕ ಬೇರೆಡೆ ನೌಕರರನ್ನು ನಿಯೋಜಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಸಾವಿರಕ್ಕೂ ಹೆಚ್ಚು ಬಿಪಿಎಲ್ ಪಡಿತರ ಚೀಟಿಗಳು ಇರುವ ಬಗ್ಗೆ ನಮಗೆ ಮಾಹಿತಿ ಬಂದಿದ್ದು, ಅವುಗಳನ್ನು ಪರಿಶೀಲಿಸಿ ಅರ್ಹರಿಗೆ ಮಾತ್ರ ಬಿಪಿಎಲ್ ದೊರೆಯುವಂತೆ ಮಾಡಬೇಕೆಂದು ಆಹಾರ ನಿರೀಕ್ಷಕರಿಗೆ ಸೂಚಿಸಿದರು.
ಪಡಿತರ ಅಕ್ಕಿ ಕಳ್ಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಅಕ್ಕಿ ಮಿಲ್ ಹಾಗೂ ನ್ಯಾಯಬೆಲೆ ಅಂಗಡಿಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುವಂತೆ ತಿಳಿಸಿ, ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕ ಪ್ರತಿನಿಧಿಗಳಿಂದ ಜನತೆಗೆ ಏನೇ ತೊಂದರೆಯಾದರೂ ತಮ್ಮ ಮೊಬೈಲ್ 9480076444 ಗೆ ಕರೆ ಮಾಡುವಂತೆ ತಿಳಿಸಿದರು.
ನಿಗದಿತ ಅವಧಿಯೊಳಗೆ ವೇತನ
ಸಕಲೇಶಪುರ: ಗ್ರಾಮಲೆಕ್ಕಿಗರ ವೇತನವನ್ನು ನಿಗಧಿತ ಅವಧಿಯಲ್ಲಿ ನೀಡುವಂತೆ ಲೋಕಾಯುಕ್ತ ಎಸ್ಪಿ ವೇದಮೂರ್ತಿ ಹೇಳಿದ್ದಾರೆ. ಗುರುವಾರ ತಾಲೂಕು ಕಚೇರಿಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ತಾಲೂಕು ಕಚೇರಿಯಲ್ಲಿ ಯಾವುದೆ ಲೋಪ ಕಂಡು ಬಂದಿಲ್ಲ. ಕಡತಗಳ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಆದರೆ ಗ್ರಾಮಲೆಕ್ಕಿಗರ ವೇತನವನ್ನು ನಿಗಧಿತ ಸಮಯಕ್ಕೆ ನೀಡಲಾಗುತ್ತಿಲ್ಲ ಎಂಬ ದೂರು ಬಂದಿದ್ದು, ಈ ಬಗ್ಗೆ ಗಮನ ಹರಿಸುವಂತೆ ತಹಸೀಲ್ದಾರ್ ಅವರಿಗೆ ಆದೇಶಿಸಲಾಗಿದೆ ಎಂದರು. ಸಾರ್ವಜನೀಕರಿಂದ ದೂರು ಬಂದ ಹಿನ್ನೆಲೆಯಲ್ಲಿ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಕೂರೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ ಎಂತಲೂ ಹೇಳಿದರು.