2.5 ಲಕ್ಷ ಟನ್ ಕಬ್ಬು ಅರೆಯುವ ನಿರೀಕ್ಷೆ: ಬ್ರಿಟ್ಟೋ
ಚನ್ನರಾಯಪಟ್ಟಣ: ತಾಲೂಕಿನ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ವತಿಯಿಂದ 2.5 ಲಕ್ಷ ಟನ್ ಕಬ್ಬು ಅರೆಯುವ ನಿರೀಕ್ಷೆ ಹೊಂದಲಾಗಿದೆ ಎಂದು ಕಾರ್ಖಾನೆಯ ಉಪಾಧ್ಯಕ್ಷ ಬ್ರಿಟ್ಟೋ ತಿಳಿಸಿದರು.
ಕಾರ್ಖಾನೆಯ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ ಕಳೆದ ವರ್ಷವೂ 2.5 ಲಕ್ಷ ಟನ್ ಕಬ್ಬು ಅರೆಯಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಬರಗಾಲವಿದ್ದರೂ ರೈತರು ಕಬ್ಬು ಬೆಳೆದಿದ್ದು, ಕಾರ್ಖಾನೆಗೆ ಒಪ್ಪಂದವಾಗಿರುವ ಎಲ್ಲಾ ಕಬ್ಬನ್ನು ಅರೆಯಲಾಗುವುದು ಎಂದು ತಿಳಿಸಿದರು.
ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರಿಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ 2100ರು.ಗಳನ್ನು ಪ್ರತಿ ಟನ್‌ಗೆ ನೀಡಲಾಗುವುದು. ಈ ಬಗ್ಗೆ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ರೈತರ ನಡುವೆ ಮಾತುಕತೆ ನಡೆಸಿ ನಿಗದಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ನೇಮಿಸಿರುವ ಕಬ್ಬು ಬೆಲೆ ನಿಗದಿ ಸಮಿತಿ ತೀರ್ಮಾನಿಸಿ ನಿಗದಿ ಮಾಡುವ ದರ ಅಥವಾ ಅಕ್ಕಪಕ್ಕದ ಕಾರ್ಖಾನೆಗಳು ನೀಡುವ ಬೆಲೆಯನ್ನು ನೀಡಲಾಗುವುದು ಎಂದು ಹೇಳಿದರು.
ಕಳೆದ ವರ್ಷ ಮಾರುಕಟ್ಟೆಯಲ್ಲಿ ಸಕ್ಕರೆಗೆ ಬೇಡಿಕೆಯಿದ್ದ ಕಾರಣ 2350ರು.ಗಳನ್ನು ನೀಡಲಾಯಿತು. ಈ ಬಾರಿ ಪ್ರತಿ ಕ್ವಿಂಟಾಲಲ್ಸಕ್ಕರೆ ಬೆಲೆ 300ರು. ಕುಸಿದಿದ್ದರೂ ಸರ್ಕಾರ ನಿಗದಿ ಮಾಡುವ ದರವನ್ನು ನೀಡಲಾಗುವುದು ಎಂದು ತಿಳಿಸಿದರು.
ರೈತರು ಉತ್ತಮ ಇಳುವರಿ ನೀಡುವ ಹಾಗೂ 12 ತಿಂಗಳಿಗೆ ಕಟಾವಿಗೆ ಬರುವ ಕಬ್ಬನ್ನು ಬೆಳೆಯುವಂತೆ ತಿಳುವಳಿಕೆ ಮಾಡುವುದರ ಜತೆಗೆ 2007ರಿಂದ 4.5ಕೋಟಿ ರು.ಗಳನ್ನು ವೆಚ್ಚ ಮಾಡಿ ರೈತರಿಗೆ ವಿಸಿ ಫಾರಂನಿಂದ ತಳಿ ಕಬ್ಬನ್ನು ನೀಡಲಾಗಿದೆ ಎಂದು ತಿಳಿಸಿದರು.
ವಿಸ್ತರಣೆಗೆ ತಾಂತ್ರಿಕ ಅಡಚಣೆ: ಕಾರ್ಖಾನೆಯನ್ನು ಗುತ್ತಿಗೆ ಪಡೆದ ಒಂದು ವರ್ಷದಲ್ಲಿಯೇ ಸಾಮರ್ಥ್ಯ ಹೆಚ್ಚಿಸುವ ಉದ್ದೇಶ ಹೊಂದಲಾಗಿದ್ದು, ಗುತ್ತಿಗೆ ನೀಡಿರುವ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸೂಕ್ತ ದಾಖಲೆಗಳನ್ನು ನೀಡದ ಕಾರಣ ವಿಳಂಬವಾಗುತ್ತಿದೆ ಎಂದು ತಿಳಿಸಿದರು.
ಗ್ರಾಹಕರ ಸಭೆ
ಅರಕಲಗೂಡು: ಗ್ರಾಹಕರು ಬ್ಯಾಂಕಿನಿಂದ ದೊರಕುವ ವಿಶೇಷ ಸಾಲ ಸೌಲಭ್ಯ ಪಡೆದು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಬೇಕೆಂದು ಎಸ್‌ಬಿಎಂ ಪ್ರಾದೇಶಿಕ ಕಚೇರಿಯ ಡೆಪ್ಯೂಟಿ ಮ್ಯಾನೇಜರ್ ಕೆ.ಎನ್. ಕೃಷ್ಣಮೂರ್ತಿ ತಿಳಿಸಿದರು.
ಎಸ್‌ಬಿಎಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು ವ್ಯಾಪಾರ ಮತ್ತು ಕೈಗಾರಿಕಾ ಅಭಿವೃದ್ಧಿಗಾಗಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಹಲವು ರೀತಿಯ ಸಾಲ ಯೋಜನೆಗಳಿವೆ. 10 ಲಕ್ಷ ರು ವರೆಗಿನ ಸಾಲಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸೌಲಭ್ಯ ಒದಗಿಸಲು ಆರ್‌ಬಿಐ ಅದೇಶದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಬ್ಯಾಂಕಿನ ವ್ಯವಸ್ಥಾಪಕ ಎಚ್.ಎಸ್.ನಾಗೇಶ್‌ಬಾಬು ಮಾತನಾಡಿ ಜುಲೈ 31, 2013ರ ವರೆಗೆ 50 ಕೋಟಿ ರು.ಗಳ ಠೇವಣಿ ಸಂಗ್ರಹಿಸಿರುವ ಶಾಖೆ 31 ಕೋಟಿ ರು.ಸಾಲವಾಗಿ ನೀಡಲಾಗಿದೆ. ಇದರಲ್ಲಿ ವ್ಯಾಪಾರ ಸಾಲವಾಗಿ 4 ಕೋಟಿ ರು, ಹಾಗೂ 17 ಕೋಟಿ ರು. ಕೃಷಿ ಸಾಲ ವಿತರಿಸಲಾಗಿದೆ ಎಂದರು.
ಉದ್ಯಮ ಕ್ಷೇತ್ರ ಲಾಭದಾಯಕ ಚಟುವಟಿಕೆ ಇದ್ದಂತೆ: ನಟರಾಜ್
ಹಾಸನ: ಉದ್ಯಮ ಕ್ಷೇತ್ರ ಒಂದು ಲಾಭದಾಯಕ ಚಟುವಟಿಕೆ ಇದ್ದಂತೆ ಎಂದು ಜಿಲ್ಲಾ ಕೈಗಾರಿಕೆ ಮತ್ತು ವಾಣಿಜೋದ್ಯಮ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಯು.ಎನ್. ನಟರಾಜ್ ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಉದ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಪ್ರತಿ ದಿನ ಚಟುವಟಿಕೆಗಳಿಂದ ಇರಲು ಸಾಧ್ಯವಾಗುತ್ತದೆ. ಉದ್ಯಮ ಶೀಲತೆಯಲ್ಲಿ ಲಾಭ ನಷ್ಟ ಎಂಬ ಅಂಶಗಳು ಇಲ್ಲ. ಅದರ ಬದಲಾಗಿ ಗೊತ್ತಿರುವುದನ್ನು ಗೊತ್ತು ಪಡಿಸುವುದೇ ಉದ್ಯಮಶೀಲತೆ. ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಅಪಾರ ಉದ್ಯೋಗ ಅವಕಾಶಗಳಿದ್ದು, ವಿದ್ಯಾರ್ಥಿನಿಯರು ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ರೂಪ್‌ರಾಜ ಚಂದನ್ ಮಾತನಾಡಿ, ದೇಶದಲ್ಲಿ ವಾಣಿಜ್ಯ ಕ್ಷೇತ್ರ ದಿನ ದಿನಕ್ಕೂ ಬೆಳೆಯುತ್ತಿದ್ದು, ವಿದ್ಯಾರ್ಥಿನಿಯರು ಉತ್ತಮ ವಿದ್ಯಾಭ್ಯಾಸ ಪಡೆದುಕೊಳ್ಳುವ ಮೂಲಕ ವಾಣಿಜ್ಯ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಳ್ಳಬೇಕು. ವಿದ್ಯಾರ್ಥಿ ದಿನಗಳಲ್ಲಿ ಉತ್ತಮ ಗುಣಗಳನ್ನು ಮೈಗೂಢಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಬೇಕು ಎಂದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ್‌ನಾಯ್ಕ, ಪ್ರೊ. ಸಾವಿತ್ರಿ, ಪ್ರೊ. ಕಮಲ, ಡಾ. ರಮೇಶ್, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಎಚ್.ಕೆ. ದಿಲೀಪ್‌ಕುಮಾರ್ ಇದ್ದರು.