ಅನೈತಿಕ ಚಟುವಟಿಕೆಗಳ ತಾಣ ಇಲಾಖೆ ಕಟ್ಟಡ
ಸಕಲೇಶಪುರ: ತಾಲೂಕಿನ ಬಾಗೇ ಗ್ರಾಮದಲ್ಲಿರುವ ಲೋಕೋಪಯೋಗಿ ಇಲಾಖೆಯ ಕಟ್ಟಡ ಅನಾಥವಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ರಾಷ್ಟ್ರೀಯ ಹೆದ್ದಾರಿ 48 ರ ಸಮೀಪವೇ 1980 ರ ದಶಕದಲ್ಲಿ ಇಲಾಖೆಯ ಅಭಿಯಂತರರ ವಾಸಕ್ಕೆಂದು ನಿರ್ಮಾಣವಾಗಿರುವ ಕಟ್ಟಡ ದಶಕದಿಂದ ಪಾಳುಬಿದ್ದಿದೆ.
ಕಟ್ಟಡದ ಸುತ್ತಮುತ್ತ ಗಿಡಗಂಟಿಗಳು ಬೆಳದಿದ್ದು, ಭೂತ ಬಂಗಲೆಯಂತೆ ಗೋಚರಿಸುತ್ತಿದೆ. ಈ ಕಟ್ಟಡವನ್ನು ದುರಸ್ತಿಗೊಳಿಸಿ ಇತರೆ ಇಲಾಖೆಗೆ ನೀಡುವಂತೆ ಗ್ರಾಮಸ್ಥರು ಮಾಡಿರುವ ಮನವಿಗೆ ಇದುವರೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿಲ್ಲ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಈ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಹಾಗೂ ರಾತ್ರಿ ವೇಳೆ ಈ ಕಟ್ಟಡ ಜೂಜು ಅಡ್ಡೆಯಾಗಿ ಪರಿವರ್ತನೆಯಾಗುತ್ತಿದೆ ಎಂಬ ಆರೋಪವು ದಟ್ಟವಾಗಿದೆ.
ಇಂದು ಆರೋಗ್ಯ ತಪಾಸಣಾ ಶಿಬಿರ
ಹೊಳೆನರಸೀಪುರ: ಮೈಸೂರಿನ ಕೆನರಾಬ್ಯಾಂಕ್ ವೃತ್ತ ಕಚೇರಿ, ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆ ಹಾಗೂ ಜೋಡಿಗುಬ್ಬಿ ವಿಪ್ರವೃಂದ ಆಶ್ರಯದಲ್ಲಿ ಆ.25 ರಂದು ಬೆಳಗ್ಗೆ 9.30ಕ್ಕೆ ಹೊಳೆನರಸೀಪುರ ತಾಲೂಕು ಜೋಡಿಗುಬ್ಬಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಹಿರಿಯ ಪ್ರಬಂಧಕ ಶ್ರೀಕಂಠಸ್ವಾಮಿ ಕೋರಿದ್ದಾರೆ.
ಸಂಸ್ಕೃತ ಸಂಭಾಷಣಾ ಶಿಬಿರ ಸಮಾರೋಪ
ಅರಕಲಗೂಡು: ಸಂಸ್ಕೃತ ಭಾರತಿ, ಸಂಸ್ಕೃತ ವಾಗ್ವರ್ಧಿನೀ ಪಾಠಶಾಲೆ ಮತ್ತು ರಾಮನಾಥಪುರದ ಪಟ್ಟಾಭಿರಾಮ ಸಂಸ್ಕೃತ ಪಾಠಶಾಲೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಂಸ್ಕೃತ ಸಂಭಾಷಣಾ ಶಿಬಿರ ಸಮಾರೋಪ ಮತ್ತು ಸಂಸ್ಕೃತೋತ್ಸವ ಸಮಾರಂಭ ಭಾನುವಾರ ಮ. 3.30ಕ್ಕೆ ಇಲ್ಲಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಕೃತ ಭಾರತಿಯ ಗೌರವಾಧ್ಯಕ್ಷ ಎ.ಎನ್.ಗಣೇಶಮೂರ್ತಿ ವಹಿಸುವರು. ಪತ್ರಕರ್ತ ಅ.ರಾ.ಸುಬ್ಬರಾವ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಂಸ್ಕೃತ ಭಾರತಿ ಜಿಲ್ಲಾ ಸಂಯೋಜಕ ವಿಶ್ವನಾಥ ದೀಕ್ಷಿತ್, ರಾಮನಾಥಪುರದ ಪಟ್ಟಾಭಿರಾಮ ಗ್ರಾಮಾಂತರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಮ.ನ.ಶ್ರೀನಿವಾಸ್ ಭಾಗವಹಿಸುವರು. ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ವಲಯ ಸಂಯೋಜಕ ವಿದ್ವಾನ್ ರಾಜಶೇಖರ ಮೂರ್ತಿ, ವಿಷಯ ಪರಿವೀಕ್ಷಕ ವಿದ್ವಾನ್ ಎಲ್.ಹೆಗ್ಗಡೆ,ಗಾನಕಲಾಶ್ರೀ ಮಹಿಳಾ ಸಂಘದ ಅಧ್ಯಕ್ಷೆ ವಾಸವಾಂಬ ಜೆ.ಗುಪ್ತ, ಭುವನೇಶ್ವರಿ ಕಲಾ ಮತ್ತು ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಶಾಂತಮ್ಮ ಆನಂದರಾಮ ಶೆಟ್ಟಿ ಇವರುಗಳು ಉಪಸ್ಥಿತರಿರುವರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಲಿದೆ ಎಂದು ಸಂಯೋಜಕ ಉಮಾಶಂಕರ್ ತಿಳಿಸಿದ್ದಾರೆ.
ನವೋದಯ ಪರೀಕ್ಷೆಗಳಿಗೆ ಅರ್ಜಿ
ಅರಕಲಗೂಡು: ಈ ಸಾಲಿನ ಎನ್‌ಟಿಎಸ್‌ಇ ಪರೀಕ್ಷೆ, ಎನ್‌ಎಮ್‌ಎಮ್‌ಎಸ್ ಪರೀಕ್ಷೆ ಹಾಗೂ ನವೋದಯ ಪರೀಕ್ಷೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಎನ್‌ಟಿಎಸ್‌ಇ ಮತ್ತು ಎನ್‌ಎಮ್‌ಎಮ್‌ಎಸ್ ಪರೀಕ್ಷೆಗಳಿಗೆ ಸೆ.10 ಮತ್ತು ನವೋದಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.