ಅರಸೀಕೆರೆ ಸಾರಿಗೆ ಘಟಕದಲ್ಲಿ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮ
ಅರಸೀಕೆರೆ: ಸನಾತನ ಕಾಲದಿಂದಲೂ ವಿಘ್ನೇಶ್ವರನಿಗೆ ವಿಶೇಷ ಮಹತ್ವವಿದ್ದು, ಯಾವುದೇ ಶುಭ ಕಾರ್ಯ ಮಾಡುವಾಗ ಮೊದಲು ಗಣಪತಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಅಂತೆಯೇ ಗಣಪತಿ ಪೂಜೆ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಮಾನಸಿಕ ಮತ್ತು ದೈಹಿಕ ಚಟುವಟಿಕೆಗೆ ಸ್ಫೂರ್ತಿಯಾಗಿದೆ ಎಂದು ಪಟ್ಟಣದ ಸಾರಿಗೆ ಸಂಸ್ಥೆ ಡಿಪೋ ವ್ಯವಸ್ಥಾಪಕ ಕೆ.ವೆಂಕಟೇಶ್ ಹೇಳಿದರು.
ಪಟ್ಟಣದ ಸಾರಿಗೆ ಸಂಸ್ಥೆ ಘಟಕದಲ್ಲಿ ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಡಿಪೋ ಆವರಣದಲ್ಲಿರುವ ಮಹಾ ಗಣಪತಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷ ಸಂಗತಿ ಎಂದರು. 30 ದಿನ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಸ್ಥೆ ಸಿಬ್ಬಂದಿ ಸ್ವಯಂ ಪ್ರೇರಿತವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಸಿಬ್ಬಂದಿ ಡಿ.ಬಿ ರಾಮಸ್ವಾಮಿ, ಎಂ.ಜಿ.ಅರುಣಕುಮಾರ, ಪ್ರಕಾಶ್, ನಾಗರಾಜು, ಬಸವರಾಜು, ಶ್ರೀನಿವಾಸ್ ಇದ್ದರು.