ರಾಯರ ಆರಾಧನಾ ಮಹೋತ್ಸವ
ಅರಸೀಕೆರೆ: ಮಂತ್ರಾಲಯದ ಮಹಾಮಹಿಮರಾದ ಶ್ರೀರಾಘವೇಂದ್ರ ಸ್ವಾಮಿಗಳ 342 ನೇ ವರ್ಷದ ಆರಾಧನಾ ಮಹೋತ್ಸವ ಅಂಗವಾಗಿ ಪಟ್ಟಣದ ಶ್ರೀರಾಘವೇಂದ್ರ ಮಠದಲ್ಲಿ ಗುರುಗಳ ಆರಾಧನಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು.
ಆರಾಧನಾ ಮಹೋತ್ಸವ ಪ್ರಯುಕ್ತ ನಿರ್ಮಾಲ್ಯ ಪೂಜೆ, ಉಷ: ಕಾಲ ಪೂಜೆ, ಪಂಚಾಮೃತ ಅಭಿಷೇಕ ಮತ್ತು 108 ಲೀಟರ್ ಕ್ಷೀರಾಭಿಷೇಕ, ಅರ್ಚನೆ ಹಾಗೂ ಮಹಾಮಂಗಳಾರತಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಪ್ರತಿನಿತ್ಯ ಭಕ್ತರಿಂದ ಬೃಂದಾವನ ಸೇವೆ, ಸರ್ವ ಸಮರ್ಪಣಾ ಸೇವೆ, ಕನಕಾಭಿಷೇಕ, ಹಸ್ತೋದಕ, ಪಲ್ಲಕ್ಕಿ ಉತ್ಸವ ಸೇವಾ ಕಾರ್ಯಕ್ರಮ ನಡೆದು ನಂತರ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದ ನಂತರ ಡೋಲೋತ್ಸವ ಮತ್ತು ಮಹಾಮಂಗಳಾರತಿ ಹಾಗೂ ಭಕ್ತರಿಗೆ ಪ್ರಸಾದ ವಿನಿಯೋಗವನ್ನು ನೆರವೇರಿಸಲಾಯಿತು. ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿ ಶ್ರೀಗುರುಗಳ ಆಶೀರ್ವಾದ ಪರಮಾನುಗ್ರಹಕ್ಕೆ ಪಾತ್ರರಾದರು.
27ರಂದು ಗಿಡ ಉಚಿತ ವಿತರಿಸುವ ಕಾರ್ಯಕ್ರಮ
ಚನ್ನರಾಯಪಟ್ಟಣ: ಭೂಮಿ ಉಳಿಸಿ ಆಂದೋಲನ, ಸ್ನೇಹ ಬಳಗ ಹಾಗೂ ಪಟ್ಟಣದ ಶಾಲಿನಿ ವಿದ್ಯಾಶಾಲೆ ವತಿಯಿಂದ ಆ.27ರಂದು ಗಿಡಗಳನ್ನು ಉಚಿತ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ಪ್ರೇಮಿ ಚ.ನಂ ಅಶೋಕ್ ತಿಳಿಸಿದ್ದಾರೆ.
ತಮ್ಮ ಸಂಘಟನೆ ವತಿಯಿಂದ ಕಳೆದ 15 ವರ್ಷಗಳಿಂದ ಉಚಿತವಾಗಿ ಗಿಡಗಳನ್ನು ರೈತರಿಗೆ ಹಂಚಿಕೆ ಮಾಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 35ಸಾವಿರ ಗಿಡಗಳನ್ನು ಉಚಿತವಾಗಿ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ರೈತರಿಗೆ ಮುಂದಿನ ಭವಿಷ್ಯದಲ್ಲಿ ಅನುಕೂಲವಾಗುವ ತೇಗ, ಹೊನ್ನೆ, ಬೀಟೆ, ಬೇವು, ಹಲಸು, ಸಿಲ್ವರ್, ಕರಿಬೇವು ಸೇರಿದಂತೆ ವಿವಿದ ಬಗೆಯ ಸಸಿಗಳು ಹಾಗೂ ಮನೆಯ ಮುಂದಿನ ಕೈತೋಟಗಳಲ್ಲಿ ಬೆಳೆಯಲು ವಿವಿದ ಹೂ ಹಾಗೂ ಕರಿಬೇವು ಸೇರಿದಂತೆ ಔಷಧ ಸಸಿಗಳನ್ನು ವಿತರಣೆ ಮಾಡುವ ಉದ್ದೇಶದಿಂದ ತಮ್ಮ ತೋಟದ ನರ್ಸರಿಯಲ್ಲಿ ಗಿಡಗಳನ್ನು ಬೆಳೆಯಲಾಗಿದೆ ಎಂದು ತಿಳಿಸಿದರು.
ಕಳೆದ 15 ವರ್ಷಗಳಿಂದ ರೈತರಿಗೆ 5ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಉಚಿತವಾಗಿ ನೀಡಲಾಗಿದೆಯಲ್ಲದೆ, ಪ್ರತಿ ವರ್ಷ 10ಕ್ಕೂ ಹೆಚ್ಚು ಶಾಲಾ ಮೈದಾನದಲ್ಲಿ ವಿವಿದ ರೀತಿಯ ಸಸಿಗಳನ್ನು ನೆಟ್ಟು ಪೋಷಣೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.