ಶಾಲೆ ಬಳಿ ಪೋಷಕರ ಪ್ರತಿಭಟನೆ
ಕ.ಪ್ರ. ವಾರ್ತೆ ಹೊಳೆನರಸೀಪುರ ಆ. 24
ವಿದ್ಯಾರ್ಥಿಗಳ ಸಾವಿರಾರು ರು.ಗಳಷ್ಟು ವಿದ್ಯಾರ್ಥಿ ವೇತನವನ್ನು ಶಾಲೆಯ ಮುಖ್ಯ ಶಿಕ್ಷಕ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಎಲೆಚಾಗಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದಿದೆ.
ವಿದ್ಯಾರ್ಥಿಗಳ ಪೋಷಕರು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರುಗಳೇ ಈ ಪ್ರಕರಣ ಪತ್ತೆ ಹಚ್ಚಿದ್ದು, ತಮ್ಮ ಮಕ್ಕಳ ಹಣ ನುಂಗಿರುವ ಮುಖ್ಯ ಶಿಕ್ಷಕರನ್ನು ಕೂಡಲೇ ಅಮಾನತು ಗೊಳಿಸುವಂತೆ ಆಗ್ರಹಿಸಿದರು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸರ್ಕಾರ ಪ್ರತಿ ವರ್ಷವೂ ಬಿಸಿಎಂ ಇಲಾಖೆ ಮುಖಾಂತರ ಒಂದಿಷ್ಟು ಹಣವನ್ನು ಶೈಕ್ಷಣಿಕ ಪ್ರಗತಿಗಾಗಿ ವಿದ್ಯಾರ್ಥಿ ವೇತನದ ರೂಪದಲ್ಲಿ ನೀಡುತ್ತದೆ. ಈ ರೀತಿಯಾಗಿ ಬಿಸಿಎಂ ಇಲಾಖೆಯಿಂದ 2012-13ನೇ ಸಾಲಿನಲ್ಲಿ ಇಲ್ಲಿನ ಎಲೆಚಾಗಹಳ್ಳಿ ಸರ್ಕಾರಿ ಶಾಲೆಯಲ್ಲಿನ 84 ಮಕ್ಕಳಿಗೆ ಮಾ. 2013 ರಂದು ನೀಡಲಾದ ತಲಾ 250 ರು.ಗಳ ಒಟ್ಟು 21 ಸಾವಿರ ರು.ಗಳನ್ನು ವಿದ್ಯಾರ್ಥಿಗಳಿಗೆ 5 ತಿಂಗಳು ಕಳೆದರೂ ನೀಡದೆ ಮುಖ್ಯ ಶಿಕ್ಷಕ ಹನುಮಂತರಾಜು ಗುಳುಂ ಮಾಡಿರುವುದನ್ನು ಎಸ್ಡಿಎಂಸಿ ಅಧ್ಯಕ್ಷ ವೈ.ಎ.ಮಂಜುನಾಥ್, ಸದಸ್ಯರು ಹಾಗೂ ಗ್ರಾಮಸ್ಥರು ಪತ್ತೆ ಹಚ್ಚಿದ್ದಾರೆ.
ಈ ಕುರಿತಂತೆ ಹನುಮಂತರಾಜು ಅವರನ್ನು ಪ್ರಶ್ನಿಸಿದಾಗ ಅವರಿಂದ ಸಮಂಜಸ ಉತ್ತರ ಬಾರದ ಕಾರಣ ಗ್ರಾಮಸ್ಥರೆಲ್ಲರೂ ಸೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್ ಅವರಿಗೆ ಲಿಖಿತ ದೂರು ನೀಡಿದ್ದಾರೆ. ನಂತರ ಶಾಲೆಗೆ ಬಂದ ಮುಖ್ಯ ಶಿಕ್ಷಕ ಹನುಮಂತರಾಜು ವಿದ್ಯಾರ್ಥಿ ವೇತನ ನೀಡಿರುವ ಕುರಿತಂತೆ ದಾಖಲಾತಿ ನೀಡುವಂತೆ ಎಸ್ಡಿಎಂಸಿ ಸಮಿತಿ ಹಾಗೂ ಗ್ರಾಮಸ್ಥರು ಆಗ್ರಹಿಸಿದಾಗ ಆಗಲೂ ಮುಖ್ಯ ಶಿಕ್ಷಕರಿಂದ ಸಮಂಜಸ ಉತ್ತರ ದೊರಕದಿದ್ದಾಗ ಈ ವಿಷಯವನ್ನು ಮಾಧ್ಯಮದವರಿಗೆ ತಿಳಿಸಿದರು.
ಮಾಧ್ಯಮದವರು ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಹನುಮಂತರಾಜು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಶಾಲೆಯಲ್ಲಿ ಓದದ ವಿದ್ಯಾರ್ಥಿಗೂ ಹಣ ಪಡೆದು ವ್ಯಾಸಂಗ ದೃಢೀಕರಣ ಪತ್ರ ನೀಡುವುದು, ವರ್ಗಾವಣೆ ಪತ್ರ ಪಡೆಯಲು 100 ರು. ಶಾಲೆಗೆ ಹೆಣ್ಣುಮಕ್ಕಳನ್ನು ಉಚಿತವಾಗಿ ದಾಖಲಾತಿ ಮಾಡಿಕೊಳ್ಳಲು ಸರ್ಕಾರದ ನಿಯಮವಿದ್ದರೂ ಪ್ರತಿ ವಿದ್ಯಾರ್ಥಿನಿಗೂ ತಲಾ 50 ರು.ಗಳನ್ನು ಪಡೆದಿರುವುದು, ಶಾಲೆಯ ಪ್ರತಿ ವಿದ್ಯಾರ್ಥಿಗೂ ತಲಾ 30 ರು. ಪಡೆದು ದಾಖಲಾತಿ ನೀಡದೇ ಇರುವುದು, ಶಾಲೆಯ ಶೌಚಾಲಯ ನಿರ್ಮಾಣದ ಹಣದ ಕುರಿತು ದಾಖಲಾತಿ ಒದಗಿಸದೇ ಇರುವುದು ಹೀಗೆ ಮುಖ್ಯ ಶಿಕ್ಷಕರ ವಿರುದ್ಧ ಗ್ರಾಮಸ್ಥರು ಸಾಲು ಸಾಲು ದೂರುಗಳ ಸುರಿಮಳೆಗೈದರು.
ವಿದ್ಯಾರ್ಥಿ ವೇತನವನ್ನು ಬಿ.ಸಿ.ಎಂ ಇಲಾಖೆಯಿಂದ ಪಡೆದಿದ್ದರೂ ತಿಂಗಳು ಕಳೆದರೂ ಯಾವುದೇ ವಿದ್ಯಾರ್ಥ್ಥಿಗಳಿಗೂ ವೇತನ ನೀಡಿಲ್ಲ. 2011-12ನೇ ಸಾಲಿನಲ್ಲಿಯೂ ವಿದ್ಯಾರ್ಥಿ ವೇತನವನ್ನೂ ನೀಡದೆ ದಾಖಲಾತಿಗಳನ್ನು ಮುಚ್ಚಿಟ್ಟಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಯಿತು. ಹಾಗೂ ಸ್ಥಳದಲ್ಲಿದ್ದ ಇಲಾಖೆಯ ಅಧಿಕಾರಿಗಳ ಅಸಮಾಧಾನಕ್ಕೂ ಕಾರಣವಾಯಿತು.
ಈ ಕುರಿತಂತೆ ದಾಖಲಾತಿಗಳನ್ನು ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್ ಹಾಗೂ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಕುಮಾರ್ ಅವರಿಗೆ ನೀಡುವಲ್ಲಿ ವಿಫಲವಾದ ಹನುಮಂತರಾಜು ಅವರ ವಿರುದ್ಧ ತನಿಖೆ ನಡೆಸಿ ಶೀಘ್ರ ವರದಿ ನೀಡುವಂತೆ ಬಿಆರ್ಸಿ ಕುಮಾರ್ ಹಾಗೂ ಶಿಕ್ಷಣ ಸಂಯೋಜಕ ಶ್ರೀಧರ್ ಅವರಿಗೆ ಸ್ಥಳದಲ್ಲೇ ಸೂಚಿಸಿದರು.
ವಿದ್ಯಾರ್ಥಿ ವೇತನವನ್ನು ಯಾವುದೇ ಕಾರಣಕ್ಕೂ ದುರುಪಯೋಗವಾಗದಂತೆ ಕ್ರಮ ಕೈಗೊಳ್ಳಲು ತಾವು ಬದ್ಧರಾಗಿದ್ದು, ತನಿಖೆಯಲ್ಲಿ ಲೋಪ ಕಂಡುಬಂದಲ್ಲಿ ಹನುಮಂತರಾಜು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಾಲೆಯ ಬಳಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಗ್ರಾಮಸ್ಥರಿಗೆ ಯೋಗೇಶ್ ಅವರು ಭರವಸೆ ನೀಡಿದ ನಂತರವಷ್ಟೇ ಗ್ರಾಮಸ್ಥರು ಹಾಗೂ ಪೋಷಕರು ಪ್ರತಿಭಟನೆ ಹಿಂಪಡೆದರು.
ಶಾಲೆಯಲ್ಲಿ ಮದ್ಯಾಹ್ನದ ಬಿಸಿಯೂಟ ಯೋಜನೆಯಲ್ಲೂ ವ್ಯಾಪಕ ಕೊರತೆಯಿದ್ದು, ಗುಣಮಟ್ಟವಿಲ್ಲದ ಆಹಾರ ನೀಡುತ್ತಿರುವುದಲ್ಲದೇ, ಕುಡಿಯುವ ನೀರಿನ ಅವ್ಯವಸ್ಥೆ ಸರಿಪಡಿಸದೇ ಇರುವುದು, ಶಾಲೆಯಲ್ಲಿನ ಸ್ವಚ್ಛತೆಯ ಕೊರತೆ ಮೊದಲಾದ ನ್ಯೂನತೆಗಳ ಕುರಿತಂತೆಯೂ ಗ್ರಾಮಸ್ಥರುಗಳು ಬಿಇಓ ಯೋಗೇಶ್ ಅವರ ಗಮನಸೆಳೆದರು. ಸದ್ಯದಲ್ಲಿ ಲಭ್ಯವಾಗಿರುವ ಮಾಹಿತಿಗಳು ಹಾಗು ದಾಖಲಾತಿಗಳ ಅನ್ವಯ ಮು.ಶಿ ಹನುಮಂತರಾಜು ವಿದ್ಯಾರ್ಥಿಗಳಿಗೆ ಸೇರಿದ ಸಾವಿರಾರು ರು. ಗಳಷ್ಟು ಹಣ ದುರುಪಯೋಗಪಡಿಸಿಕೊಂಡಿರುವುದು ಸಾಬೀತಾಗಿದ್ದು, ಇಲಾಖೆಯ ತನಿಖೆಯ ನಂತರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿಯನ್ನಾಧರಿಸಿ, ಉಪ-ನಿರ್ದೇಶಕರು ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ. ಸರ್ಕಾರಿ ಪೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಶಿವಶಂಕರ್, ಕರವೇ ತಾಲೂಕು ಅಧ್ಯಕ್ಷ ಕೆರಗೋಡು ಮಹೇಶ್, ಗ್ರಾಮ ಶಾಖೆ ಅಧ್ಯಕ್ಷ ಶಿವಕುಮಾರ್, ಎಸ್.ಡಿ.ಎಂ.ಸಿ ಸದಸ್ಯ ಮಂಜುನಾಥ್, ಬಿಆರ್ಪಿ ಪರಶಿವಮೂರ್ತಿ, ಶಿವಶಂಕರಪ್ಪ, ಸಿಆರ್ಪಿ ಬಿ.ಡಿ.ನಂಜಪ್ಪ ಹಾಜರಿದ್ದರು.