ಇಂದು ಮಾಂಸ ಮಾರಾಟ ನಿಷೇಧ
ಹಾಸನ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ.28ರಂದು ನಗರದಲ್ಲಿ ಮೀನು, ಕೋಳಿ, ಕುರಿ ಮತ್ತು ಹಂದಿ ಮಾಂಸ ಮಾರಾಟ ಮಾಡುವುದು ಹಾಗೂ ಯಾವುದೇ ಪ್ರಾಣಿಗಳ ವಧೆ ಮತ್ತು ಮಾರಾಟ ನಿಷೇಧಿಸಿದೆ ಹಾಗೂ ಮಾಂಸಹಾರಿ ಹೋಟೆಲ್ಗಳನ್ನು ಮುಚ್ಚಲು ಸೂಚಿಸಲಾಗಿದೆ. ಕಾನೂನು ಉಲ್ಲಂಘನೆ ಮಾಡಿದಲ್ಲಿ ಪುರಸಭೆಗಳ ಅಧಿನಿಯಮ 1964 ರ ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಎಲ್ಲರಿಗಾಗಿ ವೇದ: ಎಲ್ಲರಿಗಾಗಿ ವೇದ ಈ ಕುರಿತು ವೇದವಿದ್ವಾಂಸ ಉಪಾಧ್ಯಾಯಿ ಸುಧಾಕರ ಶರ್ಮಾ ಅವರ ಸಂದರ್ಶನ ಹಾಸನ ಆಕಾಶವಾಣಿ ಕೇಂದ್ರ ಆ.28 ರಂದು ಬುಧವಾರ ಹಾಗೂ 29 ರಂದು ಗುರುವಾರ ಬೆಳಗ್ಗೆ 8.40 ಕ್ಕೆ ಪ್ರಸಾರಮಾಡಲಿದೆ ಎಂದು ಕಾರ್ಯಕ್ರಮ ನಿರ್ವಾಹಕ ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.
ಕಟ್ಟಡ ಕಾರ್ಮಿಕರ ಸಂಘದಿಂದ ಉಪನ್ಯಾಸ
ಸಕಲೇಶಪುರ: ಕಟ್ಟಡ ಮತ್ತು ಇತರೆ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಾರೆ ಮತ್ತು ಪೈಂಟ್ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಪಟ್ಟಣದಲ್ಲಿ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.
ಕಾರ್ಮಿಕರಿಗೆ ಸರ್ಕಾರದ ಯೋಜನೆ ಮತ್ತು ಸವಲತ್ತುಗಳ ಬಗ್ಗೆ ನಗರದ ಎಂ. ಕೃಷ್ಣ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ವಿ. ಶ್ರೀನಿವಾಸ್ ಉಪನ್ಯಾಸ ನೀಡಿ, ಸರ್ಕಾರ ಕಟ್ಟಡ ಕಾರ್ಮಿಕರಿಗೆ ಸಾಕಷ್ಟು ಯೋಜನೆಗಳನ್ನು ತಂದಿದೆ. ಅದರ ಸದುಪಯೋಗ ಪಡೆಯಬೇಕು. ಕಾರ್ಮಿಕರ ಮಂಡಳಿಯ ಕಾರ್ಮಿಕ ನಿಧಿಯಲ್ಲಿ 200 ಕೋಟಿ ರು. ಹಾಗೆ ಉಳಿದಿದ್ದು, ಅದರ ಬಳಕೆಯಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
2013ನೇ ಫೆಬ್ರವರಿಯಿಂದ ಕಟ್ಟಡ ಕಾಮಗಾರಿಗೆ ಸಿಗುತ್ತಿದ್ದ ಎಲ್ಲಾ ಸೌಲಭ್ಯಗಳ ಧನಸಹಾಯ ಹೆಚ್ಚಳ ವಾಗಿದ್ದು ಇದರ ಸೌಲಭ್ಯ ಪಡೆದುಕೊಳ್ಳಬೇಕೆಂದರು. ಕಟ್ಟಡ ಮತ್ತು ಇತರೆ ನಿರ್ಮಾಣ ಮತ್ತು ಇತರೆ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ನಾಯಕರಹಳ್ಳಿ ಜಯರಾಮ ಮಾತನಾಡಿ, ಸರ್ಕಾರ ಕಟ್ಟಡ ಕಾರ್ಮಿಕರಿಗೆ ಯೋಜನೆ ಜಾರಿ ಮಾಡಿದ್ದರೂ ಆ ಯಾವ ಯೋಜನೆಗಳೂ ಕಾರ್ಮಿಕರನ್ನು ತಲುಪಲಾಗುತ್ತಿಲ್ಲ. ಕಾರ್ಮಿಕರು ಅಸಂಘಟಿತರಾಗಿರುವುದೇ ಇದಕ್ಕೆ ಕಾರಣ. ಎಲ್ಲರೂ ಸಂಘಟಿತರಾಗಿ ಸೌಲಭ್ಯ ಪಡೆದುಕೊಳ್ಳಬೇಕು ಎಂದರು. ಎಸ್ಎಫ್ಐ ಅನ್ಷದ್, ಕಟ್ಟಡ ಕಾರ್ಮಿಕರೆಲ್ಲರೂ ಬೇಗ ಮಂಡಳಿಯ ಸದಸ್ಯತ್ವ ಪಡೆದುಕೊಂಡು ಕಾಲಕಾಲಕ್ಕೆ ನವೀಕರಣ ಮಾಡಿಸಿ ಕಾರ್ಮಿಕ ಮಂಡಳಿಯ ಸೌಲಭ್ಯ ಪಡೆಯಿರಿ ಎಂದು ಸಲಹೆ ನೀಡಿದರು. ಮಂಜಣ್ಣ ಮೊದಲಾದವರು ಉಪಸ್ಥಿತರಿದ್ದರು. ಅನಿಲ್ ವಂದಿಸಿದರು.
ಜೋಸೆಫ್ ಶಾಲೆಯಲ್ಲಿ ಸಂಘಗಳ ಉದ್ಘಾಟನೆ
ಹಾಸನ: ಪ್ರತಿಯೊಬ್ಬ ವ್ಯಕ್ತಿಯು ನಾಯಕನೇ ಆಗಿದ್ದರೂ ಒಬ್ಬ ವ್ಯಕ್ತಿಯನ್ನು ನಾಯಕನನ್ನಾಗಿ ಮಾಡಿ ಅವನ ಸಾರಥ್ಯದಲ್ಲಿ ಮುಂದೆ ಸಾಗುತ್ತಾನೆ. ಅದರಲ್ಲಿ ಒಗ್ಗಟ್ಟನ್ನು ಕಾಣಬಹುದು ಎಂದು ನಗರದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಐ.ಎಂ ಮೋಹನ್ ತಿಳಿಸಿದರು.ನಗರದ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನ ಲಯೋಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಪ್ರತಿನಿಧಿ ಸಂಘ ಹಾಗೂ ಕಾಲೇಜಿನ ನಾನಾ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಯಾವ ರೀತಿ ದೇಶಿಯ ಹಾಗೂ ಜಾಗತಿಕ ಮಟ್ಟದಲ್ಲಿ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ವಿವರಿಸಿದರು. ಪ್ರತಿಮಾ ಪ್ರಭು, ಉಪನ್ಯಾಸಕ ವಿಜಯ ಕುಮಾರ್, ಒಮರ್ ಝುಬೇರ್ ಮತ್ತು ಕೆ.ಎಸ್. ವೀಣಾ ಇದ್ದರು. ಸಹೇರಾ ಸುಲ್ತಾನ ನಿರೂಪಿಸಿದರು. ಗುಣಿತ್ ಸ್ವಾಗತಿಸಿದರು.