ಕುಡುಕ ಪತಿಯ ಹತ್ಯೆಗೈದ ಪತ್ನಿ, ಮಾವ
ಕ.ಪ್ರ ವಾರ್ತೆ ಜಾವಗಲ್ ಆ. 27
ಮದ್ಯವ್ಯಸನಿ ಪತಿಯನ್ನು ಪತ್ನಿ ಮತ್ತು ಮಾವ ಸೇರಿ ಹತ್ಯೆ ಮಾಡಿ, ಜಮೀನಿನಲ್ಲಿ ಹೂತು ಹಾಕಿರುವ ಪ್ರಕರಣ ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಗಿರಿ ಕಾವಲ್ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರವಿಬೋವಿ (45) ಕೊಲೆಗೀಡಾದ ವ್ಯಕ್ತಿ. ಆತನ ಪತ್ನಿ ಮಂಜುಳ ಮತ್ತು ಮಾವ ತಿಮ್ಮಬೋವಿ ಈ ಕೃತ್ಯವೆಸಗಿದ ಆರೋಪಿಗಳು.
ಮದ್ಯವ್ಯಸನಿಯಾಗಿದ್ದ ರವಿಬೋವಿ ಪ್ರತಿನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಿದ್ದು ಆತನ ಕಿರುಕುಳವನ್ನು ತಾಳಲಾರದೆ ಮಂಜುಳ ಅಪ್ಪನ ಬಳಿ ತನ್ನ ಗೋಳನ್ನು ಹೇಳಿಕೊಂಡಿದ್ದಾಳೆ.
ಶನಿವಾರ ರಾತ್ರಿ ಪತ್ನಿ ಮಂಜುಳ ಮತ್ತು ಮಾವ ತಿಮ್ಮಾಬೋವಿ ರವಿ ಬೋವಿಯ ಕೈ ಕಾಲುಗಳನ್ನು ಕಟ್ಟಿ ಮಚ್ಚು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿ ನೀಲಗಿರಿ ಕಾವಲ್ ಜಮೀನಿನ ಬದುವಿನಲ್ಲಿ ಶವ ಹೂತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಪೋಲಿಸರು ತನಿಖೆ ಕೈಗೊಂಡು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂತು. ನಂತರ ಶವವನ್ನು ಪತ್ತೆ ಹಚ್ಚಿ ಹೊರತೆಗೆಯಲಾಯಿತು.
ಮಂಗಳವಾರ ಸ್ಥಳಕ್ಕೆ ಅಪರ ಪೊಲೀಸ್ ವರಿಷ್ಠಾಧಿಕಾರಿ ಜೆ.ಕೆ.ರಶ್ಮಿ, ಉಪವಿಭಾಗಾಧಿಕಾರಿ ಜಗದೀಶ್, ಡಿವೈಎಸ್ಪಿ ಮಂಜುನಾಥ್, ತಹಸಿಲ್ದಾರ್ ಕೇಶವಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು. ಉಪವಿಭಾಗಾಧಿಕಾರಿ ಜಗದೀಶ್ ಸಮ್ಮುಖದಲ್ಲಿ ಶವದ ಪರೀಕ್ಷೆ ನಡೆಸಲಾಯಿತು.
ಅರಸೀಕೆರೆ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್, ಪಿಎಸ್ಐ ಆರೋಕಿಯಪ್ಪ, ಉಪತಹಸಿಲ್ದಾರ್ ಅಶೋಕ್ ಇದ್ದರು. ಜಾವಗಲ್ ಪೊಲೀಸರು ಪ್ರಕರಣ ದಾಖಲಾಗಿದೆ.