ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲ: ಶಿವಲಿಂಗೇಗೌಡ
ಕ.ಪ್ರ.ವಾರ್ತೆ ಅರಸೀಕೆರೆ ಆ.27
ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಬಾರದು. ಕಾಮಗಾರಿಗೆ ಚಾಲನೆ ನೀಡುತ್ತಿರುವ ಸಂದರ್ಭದಲ್ಲಿ ಜನರನ್ನು ದಾರಿ ತಪ್ಪಿಸಿ ಪ್ರತಿಭಟನೆ ಮಾಡುತ್ತಿರುವವರಿಗೆ ನಾಚಿಕೆಯಾಗಬೇಕೆಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಬಾಣಾವರದಿಂದ ಹುಳಿಯಾರು ಮಾರ್ಗ ಹಾದು ಹೋಗುವ 90 ಕೋಟಿ ರು. ವೆಚ್ಚದ 48 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸ್ಥಗಿತಗೊಂಡ ಕಾಮಗಾರಿ ಆರಂಭಿಸಲು ಅಧಿಕಾರಿಗಳು, ಗುತ್ತಿಗೆದಾರರು, ಸಹ ಗುತ್ತಿಗೆದಾರರ ಸಭೆ ಕರೆದು ಚರ್ಚಿಸಿ ಕಾಮಗಾರಿಗೆ ಚಾಲನೆ ನೀಡುತ್ತಿರುವ ವಿಷಯ ತಿಳಿದು ಪ್ರತಿಭಟನೆ ನಡೆಸಿ ನಮ್ಮಿಂದಲೇ ಕಾಮಗಾರಿ ಆರಂಭವಾಯಿತು ಎಂಬ ತಪ್ಪು ಸಂದೇಶ ಜನರಿಗೆ ರವಾನಿಸುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಇವರ ಪ್ರತಿಭಟನೆ ಯಾರ ವಿರುದ್ಧ, ಇವರಿಗೆ ನಿಜವಾದ ಕಾಳಜಿಯಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವರಿಗೆ ಜನರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಮನವರಿಕೆ ಮಾಡಿ ತ್ವರಿತಗತಿಯಲ್ಲಿ ಕಾಮಗಾರಿ ಆರಂಭಿಸುವಂತೆ ಮನವಿ ಮಾಡುತ್ತಿದ್ದರು. ಆದರೆ ಇವರಿಗೆ ಜನರನ್ನು ದಾರಿ ತಪ್ಪಿಸುವುದನ್ನು ಬಿಟ್ಟು ಬೇರೇನೂ ಬೇಕಿಲ್ಲ ಎಂದು ಜರಿದರು.
ಅಭಿವೃದ್ಧಿ ಕಾರ್ಯದಲ್ಲಿ ತಾರತಮ್ಯ ಮಾಡಬಾರದು. ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು. ಈ ಹಿಂದೆ ಗುತ್ತಿಗೆ ಪಡೆದಿದ್ದ ಎ.ಎಸ್.ಐ.ಪಿ ಕಂಪನಿ ನಿಗದಿತ ಸಮಯದಲ್ಲಿ ಕಾಮಗಾರಿ ನಿರ್ವಹಿಸಲು ವಿಫಲವಾಗಿದ್ದು, ಈಗ ತುಮಕೂರಿನ ಶಿವಾನಂದ್ ಎಂಬುವವರಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಚಿತ್ರದುರ್ಗ ಉಪವಿಭಾಗ ಅಭಿಯಂತರರ ಆರ್. ರಮೇಶ್ ಈ ಹಿಂದೆ ಎ.ಎಸ್.ಐ.ಪಿ ಕಂಪನಿಯವರಿಗೆ 80 ಕೋಟಿ ರು.ಗೆ ಈ ರಸ್ತೆ ಕಾಮಗಾರಿ ಮಂಜೂರಾಗಿತ್ತು. 2 ವರ್ಷಗಳ ಕಾಲಾವಧಿ ನೀಡಲಾಗಿತ್ತು. ಆದರೆ ಗುತ್ತಿಗೆದಾರರು 2 ವರ್ಷದಲ್ಲಿ ಕಾಮಗಾರಿ ನಡೆಸಲು ವಿಫಲರಾದುದರಿಂದ ಮತ್ತೆ 1 ವರ್ಷ 8 ತಿಂಗಳ ಕಾಲಾವಕಾಶ ನೀಡಲಾಗಿತ್ತು ಎಂದು ತಿಳಿಸಿದರು.
ಆದರೂ ಕಾಮಗಾರಿ ನಿರ್ವಹಿಸಲು ವಿಫಲರಾಗಿದ್ದರಿಂದ ಕ್ಷೇತ್ರ ಶಾಸಕರ ಅಧ್ಯಕ್ಷತೆಯಲ್ಲಿ ಎ.ಎಸ್.ಐ.ಪಿ. ಕಂಪನಿಯವರೊಂದಿಗೆ ವಿಚಾರ ಮಾಡಿ ಈ ಕಾಮಗಾರಿಯನ್ನು ಎ.ಎಸ್.ಐ.ಪಿಯವರ ಒಡೆತನದಲ್ಲಿಯೇ ತುಮಕೂರಿನ ಗುತ್ತಿಗೆದಾರ ಶಿವಾನಂದ್ ಎಂಬುವರಿಗೆ ನೀಡಲಾಗಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ನಡೆಯಲಿದೆ ಎಂಬುದಾಗಿ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ತಾಪಂ ಅಧ್ಯಕ್ಷ ಶಿವಮೂರ್ತಿ, ಸದಸ್ಯ ಲಕ್ಷ್ಮಣ್, ಎಪಿಎಂಸಿ ನಿರ್ದೇಶಕ ಬಿ.ಎಸ್. ಅಶೋಕ್, ಗ್ರಾಪಂ ಸದಸ್ಯ ಬಿ.ಆರ್. ಸುರೇಶ್, ಜಿ.ಕೆ. ಸತೀಶ್, ಶ್ಯಾಮಸುಂದರ್, ಆರೀಫ್ಜಾನ್, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಂ. ಜಯಣ್ಣ ಇತರರು ಇದ್ದರು.