ಬಿಕ್ಕೋಡು-ಕೈಮರ ಬಳಿ ರಸ್ತೆ ತಡೆ
ಕ.ಪ್ರ.ವಾರ್ತೆ ಬೇಲೂರು ಆ.27
ಹೆಚ್ಚುವರಿ ಬಸ್ ಓಡಿಸುವಂತೆ ಆಗ್ರಹಿಸಿ ಬಿಕ್ಕೋಡು ಕೈಮರದಲ್ಲಿ ಮಂಗಳವಾರ ರಸ್ತೆ ತಡೆ ನಡೆಸಲಾಯಿತು. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡು ಮಧ್ಯಾಹ್ನದ ವರೆಗೆ ಪ್ರಯಾಣಿಕರು ಪರದಾಡುವಂತಾಯಿತು.
ತಾಲೂಕಿನ ಬಿಕ್ಕೋಡು ಕೈಮರದ ಬಳಿ ಬಸ್ ತಡೆ ನಡೆಸಿದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಾರಿಗೆ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿದರು.
ಬೆಳಗಿನಿಂದಲೇ ಬಸ್ ತಡೆದ ವಿದ್ಯಾರ್ಥಿಗಳು ಸಾರಿಗೆ ಇಲಾಖೆಯ ಡಿ.ಸಿ ಬರುವವರೆಗೂ ಪ್ರತಿಭಟನೆ ಹಿಂದೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. 10 ಗಂಟೆಗೆ ಬೇಲೂರು ಬಸ್ ನಿಲ್ದಾಣದ ಟಿ.ಸಿ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚುವರಿ ಬಸ್ ಓಡಿಸುವ ಬಗ್ಗೆ ಮೇಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಟಿ.ಸಿ ಭರವಸೆಯಿಂದ ಸಮಾಧಾನಗೊಳ್ಳದ ವಿದ್ಯಾರ್ಥಿಗಳು ನಿಮ್ಮ ಕೈಲಿ ಯಾವುದೇ ಪವರ್ ಇಲ್ಲ, ಸುಮ್ಮನೆ ಸಮಾಧಾನ ಮಾಡಲು ಇಲ್ಲಿಗೆ ಬಂದು ಮೂಗಿಗೆ ತುಪ್ಪ ಸವರಬೇಡಿ. ನಿಮ್ಮ ಸುಳ್ಳು ಭರವಸೆ ಕೇಳಿ ಸಾಕಾಗಿದೆ. ನೀವು ಹಿಂತಿರುಗಿ ನಿಮ್ಮ ಸಾರಿಗೆ ಡಿ.ಸಿ ಯನ್ನು ಕಳಿಸಿಕೊಡಿ ಎಂದು ಹೇಳಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಇ.ಪಿ. ಪ್ರವೀಣ್, ಪ್ರವೀಣಕುಮಾರ್, ಪ್ರಸನ್ನ, ಸುದೀಪ, ಮಂಜುನಾಥ್ ಹಾಗೂ ಗ್ರಾಮಸ್ಥರು ಮಾತನಾಡಿ, ಬೇಲೂರು ಬಿಕ್ಕೋಡು ಬೆಳಗೋಡು ಮಾರ್ಗವಾಗಿ ಸಕಲೇಶಪುರಕ್ಕೆ ಹಾಲಿ 2 ಬಸ್ ಓಡಾಡುತ್ತಿದೆ. ಬೆಳಿಗ್ಗೆ 9 ಗಂಟೆಗೆ ಬೇಲೂರು ಮಾರ್ಗವಾಗಿ ತೆರಳಿ ಮತ್ತೆ ಸಂಜೆ 5 ಗಂಟೆಗೆ ಸಕಲೇಶಪುರಕ್ಕೆ ಹಿಂತಿರುಗುತ್ತದೆ.
ಬೆಳಗೋಡು, ಲಕ್ಕುಂದ, ಪಾತೀಮಾಪುರ, ಹಾಗೂ ಇನ್ನಿತರ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹಾಗೂ ಇತರೆ ಕೆಲಸಗಳಿಗೆ ಸಾರ್ವಜನಿಕರು ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ಆದರೆ ಒಮ್ಮೊಮ್ಮೆ 9 ಗಂಟೆಗೆ ಬರುವ ಬಸ್ 10 ಗಂಟೆಯಾದರೂ ಬರುವುದಿಲ್ಲ. ಸಂಜೆ 5 ಕ್ಕೆ ಬರುವ ಬಸ್ 6 ಗಂಟೆಯಾದರೂ ಬಾರದೆ ಹೋಗಲೂ ಆಗದೆ ಇತ್ತ ಬರಲೂ ಆಗದೆ ದಿನನಿತ್ಯ ಪರದಾಡುವಂತಾಗಿದ್ದು ನಮ್ಮ ಗೋಳನ್ನು ಕಳೆದ 2 ವರ್ಷದಿಂದ ಹೇಳುತ್ತಾ ಬಂದರೂ ಅಧಿಕಾರಿಗಳಿಗೆ ಕೇಳದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಅರೇಹಳ್ಳಿ ಸಕಲೇಶಪುರ ಮಾರ್ಗವಾಗಿ ಹೆಚ್ಚುವರಿಯಾಗಿ ಸಿಟಿ ಬಸ್ ಮಾದರಿ 6 ಬಸ್ ಓಡಾಡುತ್ತಿದೆ. ಅದರಂತೆ ನಮಗೂ 2 ಹೆಚ್ಚುವರಿ ಬಸ್ ಓಡಿಸಬೇಕು. ಸಕಲೇಶಪುರದಿಂದ ಬೆಳಗೋಡು ಬಿಕ್ಕೋಡು ಬೇಲೂರು ಮಾರ್ಗವಾಗಿ 2 ಬಸ್ ಓಡಾಡಿದರೆ ಸಾರಿಗೆ ಇಲಾಖೆಗೂ ಲಾಭದ ಜೊತೆಗೆ ಗ್ರಾಮೀಣ ಪ್ರದೇಶದ ಜನತೆಗೂ ಅನುಕೂಲವಾಗುತ್ತದೆ. ಈ ಬಗ್ಗೆ ಸಾಕಷ್ಟು ಬಾರಿ ಇಲಾಖೆಗೆ ಮನವಿ ಮಾಡಿದ್ದರೂ ಕಿವಿಗೆ ಹಾಕಿಕೊಂಡಿಲ್ಲ. ಇದರಿಂದ ಬೇಸತ್ತು ರಸ್ತೆ ತಡೆ ನಡೆಸುತ್ತಿದ್ದೇವೆ. ಇದಕ್ಕೂ ಇಲಾಖೆ ಬಗ್ಗದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ಸಾರಿಗೆ ಸಂಸ್ಥೆಯ ಡಿಪೋ ವ್ಯವಸ್ಥಾಪಕರು 11 ಗಂಟೆಗೆ ಬರುವ ವೇಳೆಗೆ ರಸ್ತೆ ಎರಡೂ ಬದಿ ಸಾರಿಗೆ ಬಸ್ಗಳನ್ನು ತಡೆ ಹಿಡಿಯಲಾಗಿತ್ತು. ಇದರಿಂದ ಪ್ರಯಾಣಿಕರು, ಮಂಗಳವಾರ ಬಿಕ್ಕೋಡು ಸಂತೆಗೆ ಹೋಗುವವರು ತೀವ್ರ ಪರದಾಡುವಂತಾಯಿತು.
ಪ್ರತಿಭಟನಾಕಾರರ ಒತ್ತಾಯದ ಮೇರೆಗೆ ಡಿಪೋ ಮ್ಯಾನೇಜರ್ ಚಂದ್ರಪ್ಪ, ಮಾತನಾಡಿ, ಸಕಲೇಶಪುರ ಬೆಳಗೋಡು ಬಿಕ್ಕೋಡು ಬೇಲೂರಿಗೆ ದಿನನಿತ್ಯ 2 ಹೆಚ್ಚುವರಿ ಬಸ್ನ್ನು ಇಂದಿನಿಂದಲೇ ಆರಂಭಿಸಲಾಗಿದ್ದು ರೂಟ್ ನಂಬರ್ 45 ಹಾಗೂ 46 ನಂಬರ್ ಬಸ್ ಬೆಳಗಿನಿಂದ ರಾತ್ರಿವರೆಗೆ ಓಡಾಡಲಿದೆ ಎಂದು ತಿಳಿಸಿದರು. ಆನಂತರದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದು ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬಸ್ ಮತ್ತೆ ಸ್ಥಗಿತ: ಗ್ರಾಮಸ್ಥರ ದೂರು
ಸಕಲೇಶಪುರ: ಸತತ ಹೋರಾಟದ ನಂತರ ಗ್ರಾಮಕ್ಕೆ ಬಿಟ್ಟಿದ್ದ ಸಾರಿಗೆ ಬಸ್ನ್ನು ಮತ್ತೆ ನಿಲ್ಲಿಸಲಾಗಿದೆ ಎಂದು ಹೆತ್ತೂರು ಸಮೀಪದ ಹಾಡ್ಯ ಗ್ರಾಮಸ್ಥರು ದೂರಿದ್ದಾರೆ. ದಶಕದ ಹೋರಾಟದ ಫಲವಾಗಿ ವರ್ಷದಿಂದ ಸಂಜೆ ಹಾಗೂ ಮುಂಜಾನೆ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರಿಂದಾಗಿ ಗ್ರಾಮದಿಂದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿತ್ತು. ಆದರೆ ಇತ್ತೀಚ್ಚಿನ ದಿನಗಳಲ್ಲಿ ಬಸ್ ಗ್ರಾಮಕ್ಕೆ ಬರುತ್ತಿಲ್ಲ. ಮತ್ತೆ ಸಂಚಾರ ಆರಂಭಿಸವಂತೆ ಡಿಪೋ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಆದ್ದರಿಂದ ಹೆತ್ತೂರು-ವಣಗೂರು ರಸ್ತೆ ತಡೆದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.