ಬಿದಿರಿನ ಮೆಳೆಗೆ ಸಿಲುಕಿ ಮರಿಯಾನೆ ಸಾವು
ಕ.ಪ್ರ.ವಾರ್ತೆ ಸಕಲೇಶಪುರ ಆ. 27
ಬಿದಿರುಮೆಳೆಗೆ ಸಿಲುಕಿ 15 ದಿನಗಳ ಮರಿಯಾನೆ ಮೃತಪಟ್ಟ ಘಟನೆ ತಾಲೂಕಿನ ದೊಡ್ಡನಹಳ್ಳಿಹೆನ್ನಲಿ ಗ್ರಾಮ ಸಮೀಪದ ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ಆಹಾರ ಅರಸಿ ಗುಂಪಿನಿಂದ ಬೇರ್ಪಟ್ಟು ಬಂದಿದ್ದ ಈ ಮರಿಯಾನೆ ಹಿನ್ನೀರು ಪ್ರದೇಶದಲ್ಲಿರುವ ಬಿದಿರುಮೆಳೆಗೆ ಸಿಲುಕಿ ಹೊರಬರಲಾರದೆ ಮೃತ ಪಟ್ಟಿದ್ದು, ಮರಿಯಾನೆ ದೇಹ ಸಂಪೂರ್ಣ ಕೊಳೆತು ಹೋಗಿದೆ.
ಸಾರ್ವಜನಿಕರಿಂದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಯಸಳೂರು ವಲಯ ಅರಣ್ಯಾಧಿಕಾರಿ ವಿನಯಚಂದ್ರ ನೇತೃತ್ವದ ಅಧಿಕಾರಿಗಳ ತಂಡ ಮರಿಯಾನೆ ಮೃತದೇಹವನ್ನು ಹೊರತೆಗೆದು ವೈದ್ಯಕೀಯ ಪರೀಕ್ಷೆ ಒಳಪಡಿಸಿ ನಂತರ ಅಂತ್ಯ ಸಂಸ್ಕಾರ ನೆರವೇರಿಸಿದರು.
ಕಳೆದ 15 ದಿನಗಳ ಹಿಂದೆ ಮಾಜಿ ಶಾಸಕ ಬಿ.ಬಿ. ಶಿವಪ್ಪನವರ ಕಾಫಿ ತೋಟದಲ್ಲಿ ಆರು ಕಾಡಾನೆಗಳ ಹಿಂಡಿನಲ್ಲಿದ್ದ ಕಾಡಾನೆಯೊಂದು ಮರಿ ಹಾಕಿತ್ತು. ಶುಕ್ರವಾರಸಂತೆ-ಕೊಡ್ಲಿಪೇಟೆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಆನೆಯಿಂದ ಆತಂಕ ಉಂಟಾಗಿತ್ತು. ಆ. 15 ರಂದು ಈ ಸ್ಥಳದ ಸಮೀಪವೇ ಆನೆಯೊಂದು ಕಾಫಿ ತೋಟದ ರೈಟರ್ ಶ್ಯಾಂ ಎಂಬುವವರ ಬೈಕ್ ತುಳಿದು ಪುಡಿಮಾಡಿದ್ದ ಘಟನೆ ಪತ್ರಿಕೆ ವರದಿಮಾಡಿತ್ತು.