ಸ್ಥಳೀಯ ಸಂಸ್ಥೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ: ಡಿಸಿ ಸೂಚನೆ
ಕ.ಪ್ರ.ವಾರ್ತೆ ಹಾಸನ ಆ. 27
ಜಿಲ್ಲೆಯ ಹಾಸನ ನಗರಸಭೆ, ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ, ಬೇಲೂರು ಪುರಸಭೆಗಳ ಮತ್ತು ಅರಕಲಗೂಡು ಮತ್ತು ಆಲೂರು ಪಟ್ಟಣ ಪಂಚಾಯ್ತಿಗಳ ಚುನಾವಣೆಗಳು ಕಳೆದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನಡೆದಿದ್ದು, ಸರ್ಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾಚಣೆ ನಡೆಸಲು ಕ್ರಮ ವಹಿಸುವಂತೆ ನಿರ್ದೇಶಿಸಿದೆ. ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಅಧಿಸೂಚನೆ ಈಗಾಗಲೆ ಪ್ರಕಟಿಸಿದೆ. ಕರ್ನಾಟಕ ಪುರಸಭೆಗಳ (ಅಧ್ಯಕ್ಷ ಮತ್ತು ಉಪಾಧ್ಯಕ್ಷ) ಚುನಾವಣೆ ನಿಯಮಗಳು 1965 ಮತ್ತು 1995 ರ ನಿಯಮಗಳಂತೆ ಹಾಸನ ನಗರ ಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯನ್ನು ಹಾಸನ ಉಪವಿಭಾಗದ ಉಪವಿಭಾಗಾಧಿಕಾರಿಗಳು, ಇನ್ನುಳಿದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯನ್ನು ಆಯಾ ತಾಲೂಕಿನ ತಹಶೀಲ್ದಾರರು ನಡೆಸಬೇಕಾಗಿದೆ. ನಿಯಮಗಳ ರೀತ್ಯಾ ಕ್ರಮಗಳನ್ನು ಕೈಗೊಂಡು ಚುನಾವಣೆ ನಿಗದಿಯ ವೇಳಾಪಟ್ಟಿ ಮಾಹಿತಿಯನ್ನು ತಕ್ಷಣವೆ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸುವಂತೆ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.