20 ಕೆಜಿ ಅಕ್ಕಿ ಖಂಡಿಸಿ ಪ್ರತಿಭಟನೆ
ಆಲೂರು: ಅನ್ನಭಾಗ್ಯ ಯೋಜನೆಯಡಿ ಮೂವರು ಸದಸ್ಯರಿರುವ ಕುಟುಂಬಕ್ಕೆ 30 ಕೆಜಿ ನೀಡುವ ಬದಲು 20 ಕೆಜಿ ಅಕ್ಕಿ ನೀಡಿರುವುದನ್ನು ಖಂಡಿಸಿ ಫಲಾನುಭವಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ನೀಡಿ, ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ತಾಲೂಕಿನ ಅಜ್ಜೇನಹಳ್ಳಿ ಗ್ರಾಮದ ಅಮೃತೇಶ್ವರ ಯುವಕ ಸಂಘ ಬಿಳಗರವಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ ಕಾರ್ಡ್ದಾರರೊಬ್ಬರಿಗೆ 3 ಯುನಿಟ್ಗೆ 30 ಕೆಜಿ ಅಕ್ಕಿ ಎಂದು ಬಿಲ್ ಕೊಟ್ಟಿದ್ದು, 20 ಕೆಜಿ ವಿತರಿಸಿ ಕಳುಹಿಸಿದ್ದಾರೆ. ಹಾಗೆಯೇ 5 ಲಿ. ಸೀಮೆಎಣ್ಣೆ ಬದಲಿಗೆ 4 ಲೀ. ವಿತರಣೆ ಮಾಡುತ್ತಿದ್ದುದನ್ನು ಸ್ವತ: ಆಹಾರ ಇಲಾಖೆ ಅಧಿಕಾರಿ ಸಮ್ಮುಖದಲ್ಲಿ ವಿಚಾರಿಸಿದಾಗ ತಡಬಡಾಯಿಸಿದ ಅಂಗಡಿಯವರಿಗೆ ಕಡ್ಡಾಯವಾಗಿ ಬಿಲ್ ನೀಡಬೇಕೆಂದು ಅಧಿಕಾರಿ ತಾಕೀತು ಮಾಡಿ ಬಂದಿದ್ದರು. ಆದರೆ ಅಂಗಡಿಯವರು ಮತ್ತೆ ಅದನ್ನೇ ಪುನರಾವರ್ತನೆ ಮಾಡಿರುವುದನ್ನು ಖಂಡಿಸಿ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಸುಬ್ಬಶೆಟ್ಟಿಯವರಿಗೆ ಮನವಿ ಸಲ್ಲಿಸಿದರು. ಅಜ್ಜೇನಳ್ಳಿ ಲೋಕೇಶ್, ಜಿ.ಕೆ.ವೆಂಕಟೇಶ್, ರಂಗೇಗೌಡ, ಪವನ ಎ.ಟಿ,ಚಿಕ್ಕಯ್ಯ, ಗಾಯಿತ್ರಿ, ಕಮಲಮ್ಮ, ಭಾಗ್ಯ ಇದ್ದರು.
ಜಾನಪದ ಪರಿಷತ್ ತಾ. ಘಟಕದ ಪದಗ್ರಹಣ
ಹಾಸನ: ಜಾನಪದ ಸಂಸ್ಕೃತಿ ಅಭಿಪ್ರಾಯಗಳನ್ನು ಸೂಚಿಸುವ ಒಂದು ಮಾಧ್ಯಮ ಇದ್ದಂತೆ ಎಂದು ವೈದ್ಯ ಡಾ. ಗುರುರಾಜ ಹೆಬ್ಬಾರ್ ಹೇಳಿದರು.
ನಗರದ ಕೆಂಪು ಚೆಲುವಾಜಮ್ಮಣಿ ಮಹಿಳಾ ಸಮಾಜ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕ ಹಾಗೂ ಹೊಂಬಾಳೆ ಕಲಾವೃಂದದಿಂದ ಆಯೋಜಿಸಿದ್ದ ಜಾನಪದ ವಿಚಾರ ಸಂಕಿರಣ, ಜಾನಪದ ಪರಿಷತ್ ತಾ. ಘಟಕದ ಪದಗ್ರಹಣ ಹಾಗೂ ರಾಜ್ಯ ಮಟ್ಟದ ಜಾನಪದ ಗೀತಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಜಾನಪದವು ಮನುಷ್ಯನ ನಾಗರಿಕತೆಯನ್ನು ಬಿಂಬಿಸುವ ಸಂಸ್ಕೃತಿಯಾಗಿದ್ದು, ನಮ್ಮ ಮುಂದಿನ ಯುವ ಪೀಳಿಗೆಗೆ ಸಾಂಸ್ಕತಿಕ ಕಲೆಗಳ ಬಗ್ಗೆ ತಿಳಿಯಲು ಇದನ್ನು ಉಳಿಸಿ ಬೆಳಸಬೇಕಾಗಿದೆ. ಕಲಾಸಕ್ತರು ಕಡಿಮೆಯಾಗುತ್ತಿದ್ದು, ಕಲೆಯಲ್ಲಿ ತೊಡಗಿಕೊಳ್ಳುವವರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ನುಡಿದರು. ವಿಶೇಷ ಉಪನ್ಯಾಸ ನೀಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಗೌರವ ಕಾರ್ಯದರ್ಶಿ ಸಿ.ಕೆ. ಹರೀಶ್ ಜಾನಪದ ಕಲೆ ಎಂಬುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಗ್ರಾಮೀಣ ಜನರು ನಮ್ಮ ಸಂಸ್ಕತಿಯನ್ನು ಉಳಿಸಿ ಬೆಳಸಿಕೊಂಡು ಬರುತ್ತಿದ್ದು, ನಗರ ಜನರು ನಮ್ಮ ಸಂಸ್ಕತಿಯನ್ನು ಮರೆಯುತ್ತಿದ್ದಾರೆ ಎಂದು ಹೇಳಿದರು. ಜಾನಪದ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ, ನಾಟಕ ನಿರ್ದೇಶಕ ಶಾಂತಕುಮಾರ್, ಶಿಕ್ಷಕ ಎಚ್.ಎನ್. ಜಗದೀಶ್, ಪತ್ರಕರ್ತೆ ಲೀಲಾವತಿ, ಹಿರಿಯ ಸಾಹಿತಿ ಎನ್.ಎಲ್. ಚನ್ನೇಗೌಡ, ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಯೋಗ ಶಿಕ್ಷಕ ಸುರೇಶ್ ಗುರೂಜಿ ಇತರರು ಇದ್ದರು.
ಶಾಲೆ ಮಕ್ಕಳಿಂದ ಶ್ರೀ ಕೃಷ್ಣನ ವೇಷ
ಹಾಸನ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ನಾನಾ ಶಾಲೆಗಳಲ್ಲಿ ಮಕ್ಕಳಿಗೆ ಶ್ರೀಕೃಷ್ಣನ ವೇಷಭೂಷಣ ಹಾಕಲಾಗಿತ್ತು. ನಗರದ ಪೋದಾರ್ ಶಾಲೆ ಸೇರಿದಂತೆ ನಾನಾ ಶಾಲೆಗಳಲ್ಲಿ ಮಕ್ಕಳಿಗೆ ಶ್ರೀಕೃಷ್ಣ ಹಾಗೂ ರಾಧೆ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ವೇಷ ಧರಿಸುವ ಮೂಲಕ ಜನ್ಮಾಷ್ಟಮಿ ಆಚರಿಸಿದರು.