ಗೋಹತ್ಯೆ ನಿಷೇಧ ಕಾಯ್ದೆ ವಾಪಸಿಗೆ ಆಕ್ರೋಶ
ಕ.ಪ್ರ.ವಾರ್ತೆ ಹಾಸನ ಆ.28
ರಾಜ್ಯ ಕಾಂಗ್ರೆಸ್ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದಕ್ಕೆ ಪಡೆಯುವ ಮೂಲಕ ಕಾಯ್ದೆಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತ, ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಪ್ರತಿಭಟನೆ ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಅವರಿಗೆ ಮನವಿ ನೀಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಲು ಸಿದ್ಧಪಡಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆ 2010 ಮತ್ತು 2012 ಇದರಲ್ಲಿ ಕೈಗೊಂಡಿದ್ದ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯುವ ಮೂಲಕ, ಕಾಯ್ದೆಯಲ್ಲಿನ ಶಕ್ತಿಯನ್ನು ಮೊಟಕುಗೊಳಿಸಿದೆ. ಕಾಯ್ದೆಯನ್ನು ಈ ಹಿಂದೆ ಉಭಯ ಸದನಗಳಲ್ಲಿ ಅನುಮೋದಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರು ಅನೇಕ ತಿಂಗಳಿನಿಂದ ಒಪ್ಪಿಗೆ ನೀಡದೆ ತಡೆ ಹಿಡಿದಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೂತನ ಕಾಂಗ್ರೆಸ್ ಸರ್ಕಾರ ಗೋ, ಭೂ ಮತ್ತು ಪ್ರಕೃತಿ ಪ್ರೇಮಿಗಳ ಭಾವನೆಗಳಿಗೆ ಕವಡೆ ಕಿಮ್ಮತ್ತು ನೀಡದೆ ಕೇವಲ ತಮ್ಮ ಮತ ಬ್ಯಾಂಕ್ ರಾಜಕಾರಣವನ್ನು ಪೋಷಿಸುವ ಹುನ್ನಾರದಲ್ಲಿ ಈ ಮಸೂದೆಯನ್ನು ತಿರಸ್ಕರಿಸಿದೆ. ಈ ನಿರ್ಣಯದಿಂದ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಬಲವಾದ ಪೆಟ್ಟು ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ. ಹಸು ಎತ್ತುಗಳನ್ನು ಕಸಾಯಿಖಾನೆಗೆ ಕಳುಹಿಸುವಂಥ ಈ ನಿರ್ಣಯದಿಂದ ರೈತರು ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರವನ್ನು ಅವಲಂಬಿಸುವಂತೆ ಮಾಡುತ್ತಿದೆ ಎಂದು ದೂರಿದರು.
ಈಗಾಗಲೇ ಸಾರ ಕಳೆದುಕೊಂಡು ಇಳುವರಿ ಕುಂಠಿತವಾಗಿರುವ ಸಂದರ್ಭದಲ್ಲಿ ಸರ್ಕಾರದ ತೀರ್ಮಾನ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಗಡಿ ಭಾಗದಲ್ಲಿ ಗೋವುಗಳ ಕಳವು ಹೆಚ್ಚಾಗುತ್ತಿದೆ. ಹೊಸ ತಿದ್ದುಪಡಿಯಿಂದ, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿತ್ತು. ಒಂದೆಡೆ ಹಾಲು ಉತ್ಪಾದನೆಗೆ ಉತ್ತೇಜನ ನೀಡುವ ಯೋಜನೆ ಜಾರಿಗೆ ತರುವ ಸರ್ಕಾರ ಅದೇ ಹಾಲು ಕೊಡುವ ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವ ನಿರ್ಧಾರ ಕೈಗೊಂಡಿರುವುದ ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಹಿಂದಿನ ಸರ್ಕಾರದಲ್ಲಿ ರಾಜ್ಯದ ನಾನಾ ಎ ಗ್ರೇಡ್ ದೇವಸ್ಥಾನ ಸಮಿತಿಗಳಿಗೆ ನೇಮಕವಾಗಿದ್ದ ವ್ಯವಸ್ಥಾಪನಾ ಮಂಡಳಿ ಸದಸ್ಯರನ್ನು ರುದ್ದುಗೊಳಿಸಿ, ದೇವಸ್ಥಾನಗಳನ್ನು ಸಹ ಕಾಂಗ್ರೆಸ್ಸೀಕರಣ ಮಾಡಲು ಮುಂದಾಗಿರುವುದು ಖಂಡನೀಯ. ಇದಲ್ಲದೆ ನೂರಾರು ಬಿ. ಹಾಗೂ ಸಿ. ಗ್ರೇಡ್ ದೇವಸ್ಥಾನ ಸಮಿತಿಗಳನ್ನು ರದ್ದು ಗೊಳಿಸಲು ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ದೂರಿದರು.
ದೇವಸ್ಥಾನಗಳನ್ನೂ ಸರ್ಕಾರ ಕಾಂಗ್ರೆಸ್ಸೀಕರಣ ಮಾಡಲು ಹೊರಟಿರುವುದು ಸರಿಯಲ್ಲ. ದೇವಸ್ಥಾನಗಳ ಸಮಿತಿಯನ್ನು ಜಿಲ್ಲಾಡಳಿತ ವತಿಯಿಂದ ನೇಮಿಸಲಾಗಿದ್ದರೂ ಕಾಂಗ್ರೆಸ್ ಸರ್ಕಾರ ದೇವಸ್ಥಾನ ಸಮಿತಿಗಳನ್ನು ರದ್ದುಗೊಳಿಸುತ್ತಿರುವುದು ಸರಿಯಲ್ಲ. ದೇವಸ್ಥಾನಗಳು ಸಾರ್ವಜನಿಕರ ಸ್ವತ್ತಾಗಿದ್ದು, ಅದನ್ನು ಸರ್ಕಾರ ನಿಯಂತ್ರಿಸಲು ಮುಂದಾದರೆ ಸಾರ್ವಜನಿಕರ ಹಕ್ಕನ್ನು ಮೊಟಕು ಮಾಡಿದಂತಾಗುತ್ತಿದೆ ಎಂದು ಕಿಡಿಕಾರಿದರು.
ಸರ್ಕಾರದ ಈ ನಿರ್ಧಾರಕ್ಕೆ ನ್ಯಾಯಾಲಯದಲ್ಲಿ 6 ವಾರಗಳ ತಡೆಯಾಜ್ಞೆ ದೊರೆತಿದೆ. ಆದರೂ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವುದು ಕಾನೂನನ್ನು ಧಿಕ್ಕರಿಸಿದಂತಾಗಿದೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಈ ರೀತಿಯ ರಾಜಕೀಯಕರಣಗೊಳಿಸುವ ತೀರ್ಮಾನವನ್ನು ಕಾಂಗ್ರೆಸ್ ಸರ್ಕಾರ ಕೈಗೊಂಡಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದಕ್ಕೆ ಪಡೆಯುವ ತನ್ನ ನಿರ್ಧಾರ ಕೂಡಲೇ ಬದಲಿಸಿ, ದೇವಸ್ಥಾನಗಳ ಕಾರ್ಯವನ್ನು ಕಾಂಗ್ರೆಸ್ಸೀಕರಣಗೊಳಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು. ಇಲ್ಲವಾದಲ್ಲಿ ಇದರ ವಿರುದ್ಧ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ಜೀ ಜಿಲ್ಲಾಧ್ಯಕ್ಷ ರೇಣುಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಬಿ.ಕೆ.ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಪ್ರಸನ್ನ ಕುಮಾರ್, ಉದಯಕುಮಾರ್, ನಟೇಶ್ಕುಮಾರ್, ಶ್ರೀನಿವಾಸ್, ಎಚ್.ಎನ್.ನಾಗೇಶ್, ಚನ್ನರಾಯಪಟ್ಟಣ ಯುವ ಬಿಜೆಪಿ ಅಧ್ಯಕ್ಷ ಪ್ರಶಾಂತ್ ಹೊಸಮನೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅಲ್ಪಸಂಖ್ಯಾತರರನ್ನು ಓಲೈಸುವ ತಂತ್ರ
ಕ.ಪ್ರ.ವಾರ್ತೆ ಸಕಲೇಶಪುರ ಆ.28
ಗೋಹತ್ಯೆ ನಿಷೇಧ ಮಸೂದೆ ಹಿಂಪಡೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಗೋಹತ್ಯೆ ನಿಷೇಧವನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿ ಅಲ್ಪಸಂಖ್ಯಾತರರನ್ನು ಓಲೈಸುವ ಮೂಲಕ ಮತಬ್ಯಾಂಕ್ ರಾಜಕೀಯಕ್ಕೆ ಇಳಿದಿದೆ.
ಇದರಿಂದಾಗಿ ಬಹುಸಂಖ್ಯಾತರ ಆರಾಧ್ಯ ದೈವವಾದ ಗೋ ಸಂತತಿ ರಾಜ್ಯ ಸರ್ಕಾರದ ಕ್ರಮದಿಂದ ಅವಸಾನದ ಅಂಚಿಗೆ ತಲುಪುವುದು ಖಂಡಿತ. ಗೋವುಗಳಿಲ್ಲದ ನಮ್ಮ ದೇಶವನ್ನು ನೆನೆಸಿ ಕೊಳ್ಳುವುದು ಕೂಡಾ ಅಸಾಧ್ಯವೆಂದರು.
ರಾಜ್ಯ ಸರ್ಕಾರ ನಿಷೇಧಿತ ಗೋಹತ್ಯೆ ಮಸೂದೆಯನ್ನು ಹಿಂಪಡೆಯುವ ಮೂಲಕ ಬಹುಸಂಖ್ಯಾತ ಹಿಂದೂಗಳ ಭಾವನೆಯನ್ನು ಗೌರವಿಸ ಬೇಕು ಎಂದು ಆಗ್ರಹಿಸಿ ಉಪವಿಭಾಧಿಕಾರಿ ಅನುಪಸ್ಥಿತಿಯಲ್ಲಿ ಕಚೇರಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು.
ಬಿಜೆಪಿ ಅಧ್ಯಕ್ಷ ಕ್ಯಾಮನಹಳ್ಳಿ ರಾಜಕುಮಾರ್,ಕಾರ್ಯದರ್ಶಿ ಹೆಬ್ಬನಹಳ್ಳಿ ಸಂದೇಶ್, ಮುಖಂಡ ಡಾ. ನಾರಾಯಣಸ್ವಾಮಿ, ಮಂಜುನಾಥ್ ಸಿಂಘ್ವಿ, ನಾರಾಯಣ ಆಳ್ವ ಇತರರು ಇದ್ದರು.