ತಂದೆ-ತಾಯಿ ಮರೆಯುವ ಮಕ್ಕಳು
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ಆ.28
ತಂದೆ ತಾಯಿ ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿ ಮಾಡುತ್ತಾರೆ. ಆದರೆ ಕೆಲವರು ತಂದೆ ತಾಯಿಯನ್ನೇ ಮರೆಯುವ ಪ್ರವೃತ್ತಿ ಬೆಳಸಿಕೊಂಡಿದ್ದಾರೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶಾಲಿನಿ ವಿದ್ಯಾಶಾಲೆ ಆವರಣದಲ್ಲಿ ಭೂಮಿ ಉಳಿಸಿ ಆಂದೋಲನ ಹಾಗೂ ಸ್ನೇಹ ಬಳಗದ ವತಿಯಿಂದ ಉಚಿತ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಪೋಷಕರು ತಮ್ಮ ಮಕ್ಕಳನ್ನು ಹಲವು ವರ್ಷ ಕಾಲ ಸಾಕುತ್ತಾರೆ. ಆದರೆ ಮಕ್ಕಳು ತಂದೆ ತಾಯಿಯನ್ನು ಮರೆತು ಅವರಿಗೆ ಯಾವುದೇ ರೀತಿಯಲ್ಲಿ ಪ್ರತಿಫಲ ನೀಡುವುದಿಲ್ಲ. ಆದರೆ ಅದೇ ಸಸಿಗಳನ್ನು ನೆಟ್ಟು ಬೆಳಸಿದರೆ ಅದಕ್ಕೆ ತಕ್ಕ ಪ್ರತಿಫಲ ನೀಡುತ್ತದೆ ಎಂದು ತಿಳಿಸಿದರು.
ಏನನ್ನೂ ಅರಿಯದ ಮರಗಿಡಗಳು ಹಾಗೂ ಪ್ರಾಣಿಗಳು ತಮ್ಮನ್ನು ಸಾಕಿದವರಿಗೆ ಪ್ರತಿಫಲ ನೀಡುವ ಈ ಸಂದರ್ಭದಲ್ಲಿ ತಮ್ಮ ಮಕ್ಕಳಿಗಾಗಿ ಏನೆಲ್ಲಾ ಆಸ್ತಿ, ವಿದ್ಯೆ ನೀಡುವ ಪೋಷಕರನ್ನು ಮಕ್ಕಳು ಮರೆಯುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.
ಹಿಂದಿನ ದಿನಗಳಲ್ಲಿ ಜನತೆ ಮರಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದರು. ಆದರಿಂದು ಕಾಂಕ್ರಿಟ್ ನಾಡನ್ನು ಮಾಡುವತ್ತಾ ಮನುಷ್ಯ ಮುಂದಾಗುತ್ತಿದ್ದು, ನಗರ ಪ್ರದೇಶಗಳಲ್ಲಿ ತನಗಿರುವ ಎಲ್ಲಾ ಪ್ರದೇಶವನ್ನು ಮನೆ ಕಟ್ಟಲು ಮುಂದಾಗುತ್ತಿದ್ದು, ಈ ನಡುವೆ ಮರಗಿಡಗಳು ಮನೆಯ ಸುತ್ತಮುತ್ತ ಅಗತ್ಯವಿದೆಯೆಂಬುದನ್ನು ಮರೆಯುತ್ತಿರುವ ಮನುಷ್ಯ ಉತ್ತಮ ಪರಿಸರವನ್ನು ಬಯಸುವಲ್ಲಿ ಮುಂದಾಗುತ್ತಿಲ್ಲ ಎಂದು ತಿಳಿಸಿದರು.
ಕೆಲ ಗ್ರಾಮಗಳಲ್ಲಿ ಹಿಂದಿನ ಅರಳೀಕಟ್ಟೆಗಳನ್ನು ನಾವು ನೋಡುತ್ತೇವೆ. ಅವುಗಳಿಂದ ಇಡೀ ಗ್ರಾಮಕ್ಕೆ ಅಗತ್ಯ ಆಮ್ಲಜನಕ ಸಿಗುತ್ತಿದ್ದು, ಮಹಿಳೆಯರು ಅರಳೀಕಟ್ಟೆ ಸುತ್ತಿ ಪ್ರದಕ್ಷಿಣೆ ಮಾಡುವ ಪದ್ಧತಿಯಿದೆ. ಅದು ವೈಜ್ಞಾನಿಕ ಹಾಗೂ ಧಾರ್ಮಿಕ ಭಾವನೆಗಳಿಂದಲೂ ನೈಜತೆಯನ್ನು ಸಾರುತ್ತದೆ ಎಂದು ಹೇಳಿದರು.
ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಆಶೀರ್ವಚಿಸಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದು ಒಂದು ಸಮಾಜ ಸೇವೆಯಾಗಿದ್ದು, ಜನತೆ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದರೆ ಉತ್ತಮ ಪರಿಸರ ಬೆಳಸಿಕೊಳ್ಳಬಹುದಾಗಿದೆ ಎಂದರು.
ದಸರೀಘಟ್ಟದ ಚಂದ್ರಶೇಖರ ಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ, ಜಿಪಂ ಸದಸ್ಯೆ ಕುಸುಮಾ ಬಾಲಕೃಷ್ಣ, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎಸ್. ವಿಜಯ್‌ಕುಮಾರ್, ಬಿಜೆಪಿ ಮುಖಂಡ ಪಟೇಲ್ ಮಂಜುನಾಥ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ್ ಉಪಸ್ಥಿತರಿದ್ದರು.
ಶಾಲಿನಿ ವಿದ್ಯಾಸಂಸ್ಥೆ ಅಧ್ಯಕ್ಷ ನಂಜುಂಡೇಗೌಡ ಅಧ್ಯಕ್ಷತೆ ವಹಿಸಿದ್ದರು. ಪರಿಸರ ಪ್ರಶಸ್ತಿ ಪುರಸ್ಕೃತ ಚನಂ ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನರಾಯಪಟ್ಟಣ ತಾಲೂಕು ವಲಯ ಅರಣ್ಯಾಧಿಕಾರಿ ಧರ್ಮಪ್ಪ ಅವರ ಸೇವೆಯನ್ನು ಗುರುತಿಸಿ ಭೂಮಿ ಉಳಿಸಿ ಆಂದೋಲನ ವತಿಯಿಂದ ಭೂಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪರಿಸರ ಉಳಿಸಿ ಕುರಿತ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ವಿಜೇತ ಶಾಲಾ ಮಕ್ಕಳು, ತಾಲೂಕಿನಲ್ಲಿ ಉತ್ತಮ ಕೈತೋಟ ನಿರ್ಮಿಸಿರುವ ಮನೆ ಮಾಲಿಕರಿಗೆ ಬಹುಮಾನ ನೀಡಿ ಗೌರವಿಸಲಾಯಿತು.