ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಕ.ಪ್ರ.ವಾರ್ತೆ ಅರಸೀಕೆರೆ ಆ.28
ಒಲಂಪಿಕ್‌ನಲ್ಲಿ ಭಾರತೀಯರು ಕ್ರೀಡೆಯಲ್ಲಿ ಹಿಂದೆ ಉಳಿಯುತ್ತಿರುವುದರಿಂದ ಚೀನಾ, ಅಮೇರಿಕಾ ದೇಶಗಳಲ್ಲಿ ಕ್ರೀಡಾಭಿವೃದ್ಧಿಗೆ ನೀಡುವಂತಹ ನೆರವನ್ನು ಭಾರತೀಯ ಕ್ರೀಡಾಪಟುಗಳಿಗೂ ನೀಡುವ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡಬೇಕೆಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವೇಗೌಡ ಆಗ್ರಹಿಸಿದರು.
ಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಪಾಶ್ಚಿಮಾತ್ಯ ದೇಶಗಳಲ್ಲಿರುವಂತೆ ಪ್ರತಿ ಗ್ರಾಮದಲ್ಲಿಯೂ ಕ್ರೀಡಾಶಾಲೆಗಳನ್ನು ತೆರೆಯುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದರೆ ಅವರು ಉತ್ತಮ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಲು ಸಾಧ್ಯವಾಗುತ್ತದೆ. ಆದರೆ ಭಾರತದಲ್ಲಿ ಅಂತಹ ಅವಕಾಶಗಳು ವಿರಳ. ಇಲ್ಲಿನ ಕ್ರೀಡಾಪಟುಗಳಿಗೂ ಅಗತ್ಯ ಸೌಲಭ್ಯ ಒದಗಿಸಿ ಕೊಡುತ್ತಿಲ್ಲ ಎಂದು ದೂರಿದರು.
ಆದ್ದರಿಂದ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಹೆಚ್ಚಿನ ತರಬೇತಿ ನೀಡುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಉತ್ತಮ ಮಾರ್ಗದರ್ಶನ ನೀಡಿದರೆ ಕ್ರೀಡಾಪಟುಗಳು ದೇಶಕ್ಕೆ ಹೆಸರು ತರುವುದರಲ್ಲಿ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ಕ್ರೀಡಾಪಟು ರೇಲ್ವೆ ಮಹದೇವ್ ಗುಂಡು ಎಸೆಯುವ ಮೂಲಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡಾಪಟುಗಳಲ್ಲಿ ಶಿಸ್ತು ಬಹುಮುಖ್ಯ. ಅಂತಹ ಶಿಸ್ತನ್ನು ರೂಢಿಸಿಕೊಂಡು ಉತ್ತಮ ತರಬೇತಿ ಹೊಂದಿ ತಾಲೂಕಿಗೆ ಹೆಸರು ತಂದುಕೊಡಬೇಕೆಂದರು. ಹಾಗೂ ಪ್ರಥಮ ಸ್ಥಾನ ಗಳಿಸಿ ಜಿಲ್ಲೆ ಹಾಗೂ ರಾಜ್ಯಮಟ್ಟಕ್ಕೆ ಪ್ರವೇಶಿಸುವವರಿಗೆ ತಲಾ ಒಂದು ಸಾವಿರ ರು. ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಿರೀಗೌಡ, ಕಾರ್ಯದರ್ಶಿ ಅಡವಿಸ್ವಾಮಿ, ದೈಹಿಕ ಶಿಕ್ಷಣ ಪರಿವೀಕ್ಷಕ ತಿಮ್ಮೇಶ್ ಮಾತನಾಡಿದರು. ಇದೇ ವೇಳೆ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವೀಣಾ ನಿರೂಪಿಸಿದರು. ಜಯರಾಮು ವಂದಿಸಿದರು. ಮಕ್ಕಳ ಪಥಸಂಚಲನ ಗಮನ ಸೆಳೆಯಿತು.