ಮದ್ಯವ್ಯಸನಿಯಾದ ಮಖ್ನಾ!
-ದಯಾಶಂಕರ ಮೈಲಿ
ಹಾಸನ: ಜೀವನ ಚಕ್ರ ಸುಗಮವಾಗಿ ಸಾಗದಿದ್ದರೆ ಮಾನವನಿರಲಿ ಪ್ರಾಣಿಗಳು ಸಹ ಬಂಡೇಳುವುದು ಸಹಜ. ಇದಕ್ಕೆ ಅನ್ವರ್ಥವೆಂಬಂತೆ ಇಲ್ಲೊಂದು ಗಂಡಾನೆ ತನ್ನದಲ್ಲದ ತಪ್ಪಿಗೆ ಹಿಂಡಿನಿಂದ ದೂರ ತಳ್ಳಲ್ಪಟ್ಟಿದೆ. ಇದರಿಂದ ಕಂಗಾಲಾಗಿ ಕಳ್ಳಭಟ್ಟಿ ಸೇವನೆ ಮಾಡುತ್ತಿದೆ!
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯಸಳೂರು ಅರಣ್ಯ ವ್ಯಾಪ್ತಿಯಲ್ಲಿ 20ರಿಂದ 22 ವರ್ಷ ಪ್ರಾಯದ ಗಂಡಾನೆ ಇದೆ. ಇದಕ್ಕೆ ಹುಟ್ಟಿನಿಂದಲೇ ಎರಡೂ ದಂತಗಳಿಲ್ಲ. ಅದಕ್ಕಾಗಿ ಇದನ್ನು 'ಮಖ್ನಾ' ಎಂದು ಕರೆಯಲಾಗುತ್ತದೆ. ಎರಡೂ ದಂತಗಳಿಲ್ಲದ ಕಾರಣಕ್ಕಾಗಿ ಇತರೇ ಕಾಡಾನೆಗಳು ಹಿಂಡಿನೊಳಕ್ಕೆ ಸೇರಿಸುತ್ತಿಲ್ಲ. ಅಲ್ಲದೇ ಹೆಣ್ಣಾನೆಗಳು 'ಮಖ್ನಾ'ನನ್ನು ವಿಕಾರವಾಗಿದ್ದರಿಂದ ಹತ್ತಿರವೂ ಬಿಟ್ಟುಕೊಳ್ಳುತ್ತಿಲ್ಲ. ಇದರಿಂದ ರೊಚ್ಚಿಗೆದ್ದ ಒಂಟಿ ಸಲಗ 'ರೆಬೆಲ್' ಆಗಿ ಎದುರಿಗೆ ಬಂದವರ ಮೇಲೆರಗುತ್ತಿದೆ.
ಸಕಲೇಶಪುರ ತಾಲೂಕು ಯಸಳೂರು ಹೋಬಳಿಯ ಕೆರೋಡಿ, ಕುಂಬರಹಳ್ಳಿ, ಚಿಕ್ಕ ಎಲ್ಲೂರು ಮತ್ತಿತರೆಡೆ ಊರ ಹೊರಗಡೆ ಇರುವ ಕಳ್ಳಭಟ್ಟಿ ಜಾಡು ಹಿಡಿದು ಹೋಗಿ ದಾಳಿ ಮಾಡಿ ಮದ್ಯ ಸೇವಿಸುತ್ತಿದೆ. ಈಗಾಗಲೇ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದು, ಬೆಳೆ ಸೇರಿದಂತೆ ಇತರೆ ಆಸ್ತಿಗೆ ಹಾನಿಯುಂಟು ಮಾಡಿದ್ದು ಲೆಕ್ಕಕ್ಕೇ ಇಲ್ಲ.
ಮಖ್ನಾ ತನ್ನ ಈ ವಯಸ್ಸಿನಲ್ಲಿ ಪ್ರತಿ ವರ್ಷ ಮೂರು ಬಾರಿ ಮದಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಸಹಜವಾಗಿ ಹೆಣ್ಣಾನೆಗಳೊಡನೆ ಬೆರೆಯಲೇಬೇಕು. ಆದರೆ ಹೆಣ್ಣಾನೆಗಳು ಹತ್ತಿರ ಸೇರಿಸಿಕೊಳ್ಳದ್ದರಿಂದ ರೊಚ್ಚಿಗೆದ್ದಿದ್ದು ಒಂಟಿಯಾಗಿ ಅಲೆಯುತ್ತಿದೆ. ಎದುರಿಗೆ ಬಂದವರ ಮೇಲೆರಗುತ್ತಿದೆ.
ಅಪಾರ ಪ್ರಮಾಣದ ಹಾನಿ: ಸಕಲೇಶಪುರ ತಾಲೂಕು ಚಿಕ್ಕ ಎಲ್ಲೂರು ಗ್ರಾಮದ ಲಕ್ಕೇಗೌಡ ಎಂಬವರು 2 ತಿಂಗಳ ಹಿಂದೆ ಮಖ್ನಾ ದಾಳಿಗೆ ತುತ್ತಾಗಿದ್ದಾರೆ. ಅಲ್ಲದೆ, ಕುಂಬರಹಳ್ಳಿ ಸಮೀಪ ಬೈಕ್ನ್ನು ಪುಡಿ ಮಾಡಿದೆ. ಬತ್ತ, ಬಾಳೆ ಮತ್ತಿತರ ಬೆಳೆಗಳನ್ನು ಹಾಳು ಮಾಡಿದೆ. ಸಕಲೇಶಪುರ ತಾಲೂಕು ಯಸಳೂರು ಹೋಬಳಿಯ ಕೆರೋಡಿ, ಕುಂಬರಹಳ್ಳಿ, ಚಿಕ್ಕ ಎಲ್ಲೂರು ಮತ್ತಿತರ ಗ್ರಾಮಗಳ ರೈತಾಪಿಗಳನ್ನು ಭಯಭೀತರನ್ನಾಗಿ ಮಾಡಿದೆ.
ಅರವಳಿಕೆ ಮದ್ದು ನೀಡಲು 2.29 ಲಕ್ಷ ಮೌಲ್ಯದ ಗನ್!
'ಮಖ್ನಾ'ನನ್ನು ಹಿಡಿದು ಬೇರೆಡೆ ಸ್ಥಳಾಂತರಿಸಲು ಹೈಕೋರ್ಟ್ ಸಮ್ಮತಿ ನೀಡಿದೆ. ಮಳೆಗಾಲ ನಿಂತ ನಂತರ ಕಾರ್ಯಾಚರಣೆ ಆರಂಭಿಸಲಾಗುವುದು. ಅದಕ್ಕಾಗಿ ಅರವಳಿಕೆ ಚುಚ್ಚು ಮದ್ದು ನೀಡಲು ಬೇಕಾದ ಗನ್ ಮಧ್ಯಪ್ರದೇಶದ ಇಂದೋರ್ನಿಂದ 2.29 ಲಕ್ಷ ನೀಡಿ ತರಿಸಲಾಗಿದೆ. ಪಳಗಿದ 5 ಕಾಡಾನೆಗಳಲ್ಲದೆ ನಾಲ್ವರು ವೈದ್ಯರು, 10 ಮಂದಿ ಮಾವುತರು ಮತ್ತು 10 ಚಕ್ರದ ಲಾರಿಯನ್ನು ಹಾಸನ ಅರಣ್ಯ ಇಲಾಖೆ ತರಿಸಿಕೊಂಡಿದೆ.
ಮಳೆಗಾಲ ಮುಗಿದ ಬಳಿಕ ಮಖ್ನಾ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗುವುದು. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅರವಳಿಕೆ ಚುಚ್ಚು ಮದ್ದು ನೀಡಿ ಹಗ್ಗಗಳಿಂದ ಬಿಗಿಯಬೇಕು. ಒಂದು ವೇಳೆ ಹಗ್ಗ ಬಿಚ್ಚಿಕೊಂಡರೆ ಆಗುವ ಅನಾಹುತ ಊಹಿಸಲು ಸಾಧ್ಯವಿಲ್ಲ.
-ಲಕ್ಷಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ