ಹೊಳೆನರಸೀಪುರ - ಹಾಸನ ನಡುವೆ ನೂತನ 2 ಸಾಮಾನ್ಯ ಸಾರಿಗೆ ಮಾರ್ಗಗಳಿಗೆ ಚಾಲನೆ
ಹೊಳೆನರಸೀಪುರ: ತಾಲೂಕಿನ ಗ್ರಾಮೀಣ ಭಾಗಗಳಿಗೂ ಸುಗಮ ಮತ್ತು ಸುವ್ಯವಸ್ಥಿತ ಸಾರಿಗೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿನ ಘಟಕ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆಗೆ ಚಿಂತನೆ ನಡೆಸಲಾಗಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಹೊಳೆನರಸೀಪುರ ಸಾರಿಗೆ ಘಟಕ ವತಿಯಿಂದ ಹೊಳೆನರಸೀಪುರ ಮತ್ತು ಹಾಸನ ನಡುವೆ ನೂತನವಾಗಿ 2 ಸಾಮಾನ್ಯ ಸಾರಿಗೆ ಮಾರ್ಗಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗಗಳಿಗೂ ಸಾರಿಗೆ ಸಂಪರ್ಕವನ್ನು ಉತ್ತಮಪಡಿಸಿದಲ್ಲಿ ತಾಲೂಕಿನ ನಾನಾ ಭಾಗಗಳಿಂದ ತಾಲೂಕು ಕೇಂದ್ರಕ್ಕೆ ದಿನನಿತ್ಯದ ಕೆಲಸ ಕಾರ್ಯಗಳಿಗೆ ಓಡಾಡಲು ಸಾರ್ವಜನಿಕರಿಗೆ ಸೌಕರ್ಯ ಕಲ್ಪಿಸಿದಂತಾಗುತ್ತದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಹೊಳೆನರಸೀಪುರದಿಂದ ಪಡುವಲಹಿಪ್ಪೆ ಮಾರ್ಗವಾಗಿ ಹಾಸನಕ್ಕೆ, ಪಟ್ಟಣದಿಂದ ಹರಿಹರಪುರ ಮಾರ್ಗವಾಗಿ ಹಾಸನಕ್ಕೆ ಹಾಗೂ ಅರಕಲಗೂಡು-ಹೊಳೆನರಸೀಪುರ -ಚನ್ನರಾಯಪಟ್ಟಣ ನಡುವೆ ನಿರಂತರವಾಗಿ ಸಾಮಾನ್ಯ ಸಾರಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಘಟಕ ವ್ಯವಸ್ಥಾಪಕರಿಗೆ ಸೂಚಿಸಿದ ಎಚ್.ಡಿ.ರೇವಣ್ಣ ಅವರು, ತಾಲೂಕು ಕೇಂದ್ರಕ್ಕೆ ವಿದ್ಯಾಭ್ಯಾಸಕ್ಕಾಗಿ ಗ್ರಾಮೀಣ ಭಾಗಗಳಿಂದ ಬರುವ ವಿದ್ಯಾರ್ಥ್ಥಿಗಳಿಗಾಗಿ ಅವಶ್ಯಕವಿರುವ ಗ್ರಾಮೀಣ ಪ್ರದೇಶಗಳನ್ನು ಗುರುತಿಸಿ ಆ ಭಾಗಗಳಿಂದ ಪಟ್ಟಣಕ್ಕೆ ಶಾಲಾ ಕಾಲೇಜು ವೇಳೆಗೆ ತಲುಪುವ ರೀತಿಯಲ್ಲಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲು ನಾನಾ ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಪಟ್ಟಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಘಟಕ ವ್ಯವಸ್ಥಾಪಕರಿಗೆ ತಿಳಿಸಿದರು.
ಪಟ್ಟಣದಿಂದ ನೂತನವಾಗಿ ಹಾಸನಕ್ಕೆ ಆರಂಭಿಸಲಾಗಿರುವ ಸಾಮಾನ್ಯ ಸಾರಿಗೆ ಮಾರ್ಗದ ಬಸ್ಗಳು ಹಾಸನದ ಹಳೆಯ ಬಸ್ ನಿಲ್ದಾಣವರೆವಿಗೂ ಸಂಚರಿಸಲಿದೆ ಎಂದ ಘಟಕ ವ್ಯವಸ್ಥಾಪಕ ಕಮಲಕುಮಾರ್ ಮಾಹಿತಿ ನೀಡಿದರಲ್ಲದೇ, ಕಳೆದ ನಾಲ್ಕೈದು ವರ್ಷಗಳಿಂದಲೂ ಸ್ಥಗಿತಗೊಂಡಿದ್ದ ಹೊಳೆನರಸೀಪುರ-ಹಾಸನ ಸಾಮಾನ್ಯ ಸಾರಿಗೆ ಮಾರ್ಗವನ್ನು ಸಾರ್ವಜನಿಕರಿಗೆ ಉಪಯೋಗ ಕಲ್ಪಿಸುವ ನಿಟ್ಟಿನಲ್ಲಿ ಪುನರಾರಂಭಗೊಳಿಸಲಾಗಿದೆ ಎಂದರು.
ಈ ಮಾರ್ಗದಲ್ಲಿನ ಸಂಚಾರಿ ದಟ್ಟಣೆಯನ್ನು ಪರಿಶೀಲಿಸಿ ಅಗತ್ಯ ಬಿದ್ದಲ್ಲಿ ಹೆಚ್ಚುವರಿಯಾಗಿ ಇನ್ನೆರಡು ಬಸ್ಗಳನ್ನು ಸಾಮಾನ್ಯ ಸಾರಿಗೆಯಡಿಯಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗುವುದು ಎಂದರು.