ಅಧಿಕಾರಿಗಳ ಗೈರು: ತಾಪಂ ಸಭೆ ಅಖೈರು
ಹೊಳೆನರಸೀಪುರ: ಕೃಷಿ ಇಲಾಖೆ... ಬಂದಿದ್ದೀರಾ, ಚೆಸ್ಕಾಂ...ಬಂದಿಲ್ವ, ಮೀನುಗಾರಿಕೆ..ಬರ್ತಾ ಇದ್ದಾರೆ, ನೀರಾವರಿ ಇಲಾಖೆ... ಬಂದಿಲ್ಲ.. ಕಾಡಾ ಇಲಾಖೆ.. ಅವರನ್ನು ನೋಡೇ ಇಲ್ಲ ಬಿಡಿ ...
ಹೀಗೆ.. ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ಹಾಜರಾತಿ ತೆಗೆದುಕೊಳ್ಳುವ ಹಾಗೆ ಗುರುವಾರ ಇಲ್ಲಿನ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಸಭೆಗೆ ಹಾಜರಾದವರ ಹಾಗು ಗೈರು ಹಾಜರಾದವರ ಹಾಜರಾತಿ ಕೂಗಿದ್ದು ವಿಶೇಷವಾಗಿತ್ತು.
ಇಲ್ಲಿನ ತಾಪಂ ನೂತನ ಅಧ್ಯಕ್ಷರ ಆಯ್ಕೆ ನಂತರ ಪುಷ್ಪಾಗೌಡೇಗೌಡ ಅಧ್ಯಕ್ಷತೆಯಲ್ಲಿ ನಡೆದ ಮೊದಲ ತಾಪಂ ಸಾಮಾನ್ಯ ಸಭೆಗೆ ತಾಲೂಕಿನ ವಿವಿಧ ಇಲಾಖೆಗಳ ಮುಕ್ಕಾಲು ಪಾಲು ಅಧಿಕಾರಿಗಳು ಗೈರು ಹಾಜರಾಗಿರುವುದನ್ನು ಕಂಡು ಅಸಮಾಧಾನಗೊಂಡ ಸದಸ್ಯರು ಅಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ ಇದೇ ಮೊದಲ ಬಾರಿಗೆ ಸಾಮಾನ್ಯ ಸಭೆಯನ್ನು ರದ್ದುಗೊಳಿಸಿ ಹೊರನಡೆದ ಘಟನೆ ನಡೆಯಿತು.
ಮುಂದುವರೆದ ಅಧಿಕಾರಿಗಳ ಸಬೂಬು: ತಾಪಂ ಸಭೆಗಳಿಗೆ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕಾಗಿ ಪತ್ರ ಬರೆಯುವಂತೆ ಈ ಹಿಂದೆಯೂ ಹಲವಾರು ಬಾರಿ ತಾಪಂ ಸದಸ್ಯರು ಆಗ್ರಹಿಸಿದ್ದರೂ ಪರಿಣಾಮ ಮಾತ್ರ ಶೂನ್ಯವಾಗಿದ್ದು, ಸಬೂಬು ಹೇಳಿ ಸಭೆಗಳಿಗೆ ಗೈರು ಹಾಜರಾಗುವ ಅಧಿಕಾರಿಗಳ ಪರಿಪಾಠ ಮುಂದುವರಿದ ಕಾರಣದಿಂದಾಗಿ ತೀವ್ರವಾಗಿ ಅಸಮಾಧಾನಗೊಂಡ ಸದಸ್ಯರು ಅಧಿಕಾರಿಗಳ ಬೇಜವಾಬ್ದಾರಿತ ಖಂಡಿಸಿ ಸಭೆ ರದ್ದುಗೊಳಿಸಿದರು. ಅಲ್ಲದೇ ಶೀಘ್ರದಲ್ಲಿಯೇ ಮತ್ತೊಂದು ಸಭೆ ಕರೆದು ಆ ಸಭೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳೆಲ್ಲರೂ ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡುವಂತೆ ಸಿಇಒ ತಮ್ಮಣ್ಣಗೌಡ ಅವರಿಗೆ ಸೂಚಿಸಿ ಸಭೆಯಿಂದ ಹೊರನಡೆದರು.
ಈ ನಡುವೆ ತಾಪಂ ನೂತನ ಅಧ್ಯಕ್ಷೆ ಪುಷ್ಪಾಗೌಡೇಗೌಡ ಅವರನ್ನು ಸಭೆಯಲ್ಲಿ ಹಾಜರಿದ್ದ ಕೆಲವು ಅಧಿಕಾರಿಗಳು ಪುಷ್ಪಗುಚ್ಚ ನೀಡು ಅಭಿನಂದಿಸಿದರು. ಸಭೆಯು ಆರಂಭಗೊಳ್ಳುತ್ತಿದ್ದಂತೆಯೇ ಅಧಿಕಾರಿಗಳ ಗೈರುಹಾಜರಾತಿಯನ್ನು ಕಂಡ ಸದಸ್ಯ ಸಿ.ಆರ್.ಮಂಜುನಾಥ್, ಕರೆಯೋದೆ.. ಎರಡು ತಿಂಗಳಿಗೊಂದು ಮೀಟಿಂಗು. ಅದಕ್ಕೂ ಅಧಿಕಾರಿಗಳು ಬರದಿದ್ರೆ ಈ ಸಭೆ ಯಾಕೆ ನಡೆಸಬೇಕು ಎಂದು ತಾಪಂ ಇಒ ಅವರನ್ನು ಪ್ರಶ್ನಿಸಿದರು. ಸದಸ್ಯೆ ಲತಾ ದನಿಗೂಡಿಸಿದರು.
ಮಾಜಿ ಅಧ್ಯಕ್ಷೆ ಕೆ.ಎಂ.ಚಂದ್ರಮತಿ ಅವರು ಈ ಸಂಬಂಧ ತಮ್ಮ ಅನುಭವ ಹಂಚಿಕೊಂಡರು.
ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಿ: ತಾಲೂಕಿನ ಕೆಲ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ತಾ.ಪಂಯ ಸಾಮಾನ್ಯ ಸಭೆಗೆ ಹಾಗೂ ಸದಸ್ಯರ ಗೌರವಕ್ಕೆ ಚ್ಯುತಿ ಬರುತ್ತಿದ್ದು, ಸದರಿ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಸರ್ಕಾರಕ್ಕೆ ಹಾಗೂ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯುವಂತೆ ಮಾಜಿ ಉಪಾಧ್ಯಕ್ಷ ಹುಚ್ಚೇಗೌಡ ಇಒ ಅವರನ್ನು ಆಗ್ರಹಿಸಿದರು.
ಶಾಸಕ ಎಚ್.ಡಿ.ರೇವಣ್ಣ ಅವರು ತಾಲೂಕಿನ ಗ್ರಾಪಂಗಳಿಗೆ ವಿವಿಧ ವಸತಿ ಯೋಜನೆಯಡಿಯಲ್ಲಿ ನಾಲ್ಕೈದು ಸಾವಿರದಷ್ಟು ಮನೆಗಳನ್ನು ತಂದಿದ್ದರೂ, ಗ್ರಾಪಂಯಲ್ಲಿನ ಪಿಡಿಓಗಳು ಹಾಗೂ ಕಾರ್ಯದರ್ಶಿಗಳ ಹೊಣೆಗೇಡಿತನದಿಂದಾಗಿ 1300ಕ್ಕೂ ಹೆಚ್ಚಿನ ಮನೆಗಳು ರದ್ಧಾಗಿವೆ, ಸರ್ಕಾರ ನೀಡುವ ರು. 75 ಸಾವಿರ ಅನುದಾನ ಪಡೆಯುವಷ್ಟರಲ್ಲಿ ಫಲಾನುಭವಿಗಳು ಅಲೆದು ಅಲೆದೂ ಅವರಿವರಿಗೆ ಕೊಟ್ಟು ಕೈತಲುಪುವುದೇ ಕೇವಲ ರು. 50 ಸಾವಿರ. ಪಿಡಿಒಗಳ ಮೇಲೆ ಆರೋಪಗಳ ಸುರಿಮಳೆಗೈದ ಸದಸ್ಯರು, ಮುಂದಿನ ಸಭೆಯ ದಿನದಂದೇ ಪಿಡಿಒ, ಕಾರ್ಯದರ್ಶಿಗಳ ಸಭೆ ಕರೆಯುವಂತೆ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.