'ಆಹಾರ ಪದ್ಧತಿಯಲ್ಲಿ ಪರಿವರ್ತನೆಯಿಂದ ಆರೋಗ್ಯ'
ಕ.ಪ್ರ.ವಾರ್ತೆ ಬೇಲೂರು ಆ.29
ಪ್ರಸಕ್ತ ದಿನಗಳಲ್ಲಿ ಆಹಾರ ಪದ್ಧತಿಯಿಂದ ಬಹುತೇಕ ರೋಗಗಳು ಕಂಡು ಬರುತ್ತಿದ್ದು, ಜನರು ತಮ್ಮ ಆಹಾರ ಪದ್ಧತಿಯಲ್ಲಿ ಪರಿವರ್ತನೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಕಾರ್ಯದರ್ಶಿ ರಮೇಶ್ಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಲಯನ್ಸ್, ಶಂಕರ್ ಕಣ್ಣಿನ ಆಸ್ಪತ್ರೆ, ಜಿಲ್ಲಾ ಆರೋಗ್ಯ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ಪ್ರಮುಖ ಅಂಗವಾದ ಕಣ್ಣನ್ನು ನಾವುಗಳು ಸುರಕ್ಷತೆಯಿಂದ ಕಾಪಾಡಿಕೊಳ್ಳಬೇಕು ಎಂದರು.
ಈ ದಿಸೆಯಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ನೇತ್ರದ ಬಗ್ಗೆ ವಿಶೇಷ ಆಸಕ್ತಿ ವಹಿಸಿ ವಿಶ್ವಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಲಯನ್ಸ್ ವಿಶ್ವದ 207 ರಾಷ್ಟ್ರದಲ್ಲಿ ಕ್ರಿಯಾ ಚಟುವಟಿಕೆ ಕೈಗೊಳ್ಳುತ್ತಾ ಬಂದಿದೆ. ಪೊಲಿಯೋ ಹಾಗೂ ವಿವಿಧ ಸಾಮಾಜಿಕ ಮತ್ತು ಜನಪರ ಕಾರ್ಯಕ್ರಮಗಳನ್ನು ನಿರ್ವಹಿಸುವ ಮೂಲಕ ವಿಶ್ವದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
ಲಯನ್ಸ್ ವಲಯ ಅಧ್ಯಕ್ಷ ಎನ್.ಆರ್.ಗಿರೀಶ್ ಮಾತನಾಡಿ, ಮುಂದಿನ ದಿನದಲ್ಲಿ ಅಂಧತ್ವ ಇರುವವರಿಗೆ ಮತ್ತು ಮಾನಸಿಕ ರೋಗಿಗಳಿಗೆ ಆತ್ಮವಿಶ್ವಾಸ ಮೂಡಿಸುವ ಕೇಂದ್ರ ತೆರೆಯಬೇಕೆಂಬ ಹಂಬಲವಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಪುರಸಭೆ ಉತ್ತಮ ಸ್ಥಳ ನೀಡಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷ ಪೂವಯ್ಯ ಮಾತನಾಡಿದರು. ಇದೇ ಸಂದರ್ಭದಲ್ಲಿ 260 ಜನರಿಗೆ ನೇತ್ರ ತಪಾಸಣೆ ನಡೆಸಲಾಯಿತು. ಶಿವಮೊಗ್ಗ ಶಂಕರ್ ನೇತ್ರ ಆಸ್ಪತ್ರೆಯ ಡಾ.ಚಿಂತನ್, ಡಾ. ಪವನ್, ಲಯನ್ಸ್ ಕಾರ್ಯದರ್ಶಿ ರಮೇಶ್ಕುಮಾರ್, ಖಜಾಂಚಿ ಸುರೇಶ್, ಡಾ.ಚಂದ್ರಮೌಳಿ, ಡಾ.ಸಂತೋಷ್, ತಾಪಂ ಸದಸ್ಯ ಸುಭಾನ್, ವಕೀಲ ರಾಜಶೇಖರ್, ರವಿಕುಮಾರ್, ಸಿದ್ದೇಗೌಡ ಮತ್ತಿತರರು ಇದ್ದರು.