ಓದಿನ ಜತೆಗೂ ಕ್ರೀಡೆಗೂ ಮಹತ್ವ ನೀಡಿ: ರೇವಣ್ಣ ಕಿವಿಮಾತು
ಹೊಳೆನರಸೀಪುರ: ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ತೋರಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸುವ ಕ್ರೀಡಾಳುಗಳನ್ನು ಗುರುತಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಉದ್ಯೋಗ ನೀಡುವ ಸಂದರ್ಭದಲ್ಲಿ ಆದ್ಯತೆ ನೀಡಿದಲ್ಲಿ ರಾಜ್ಯದಲ್ಲಿ ಕ್ರೀಡೆಯ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅಭಿಪ್ರಾಯ ಪಟ್ಟರು.ಅವರು ಪಟ್ಟಣದಲ್ಲಿನ ಹೇಮಾವತಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಓದಿನಷ್ಟೇ ಪ್ರಾಮುಖ್ಯತೆ ಕ್ರೀಡೆಗೂ ನೀಡಿ ಹೆಚ್ಚಿನ ಸಾಧನೆ ತೋರುವಂತೆ ಹೇಳಿದರು.ರಾಜ್ಯದಲ್ಲಿ ಕ್ರೀಡೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಿಂದಲೂ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕುರಿತಂತೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹದ ಜೊತೆಗೆ ರಾಜ್ಯದಲ್ಲಿ ಪ್ರತಿ ತಾಲೂಕು ಕೇಂದ್ರದಲ್ಲಿನ ಕ್ರೀಡಾಂಗಣಗಳ ಅಭಿವೃದ್ಧಿ ಹಾಗೂ ಕ್ರೀಡೆಗೆ ಅವಶ್ಯಕವಿರುವ ಮೂಲಭೂತ ಸೌಕರ್ಯಗಳ ಅನುಷ್ಠಾನಕ್ಕಾಗಿ ಕನಿಷ್ಠ ಕೋಟಿ ರು. ಅನುದಾನ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕ್ರೀಡಾಕೂಟವನ್ನು ಜ್ಯೋತಿ ಬೆಳಗಿ ಉದ್ಘಾಟಿಸುವ ಜೊತೆಗೆ ತಾಲೂಕು ಮಟ್ಟದಲ್ಲಿ ಚಾಂಪಿಯನ್ ಆದ ಕ್ರೀಡಾಳುವಿನಿಂದ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿ ಕ್ರೀಡಾಕೂಟಕ್ಕೆ ಶಾಸಕ ಎಚ್.ಡಿ.ರೇವಣ್ಣ ಶುಭಕೋರಿದರು.
ಜಿಪಂ ಸದಸ್ಯ ಎಚ್.ಎನ್.ದೇವೇಗೌಡ (ಪಾಪಣ್ಣಿ), ತಾಪಂ ಅಧ್ಯಕ್ಷೆ ಕೆ.ಎಂ.ಪುಷ್ಪಗೌಡೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್, ತಹಸೀಲ್ದಾರ್ ಮಂಜುಳ, ತಾಪಂ ಇಓ ತಮ್ಮಣ್ಣೇಗೌಡ, ತಾಪಂ ಉಪಾಧ್ಯಕ್ಷ ನಂಜುಂಡಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಕುಮಾರ್, ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎನ್.ನಾಗರಾಜ್ ಇತರರು ಇದ್ದರು.