ದಸರೆ ಕ್ರೀಡೆಗೆ ಚಾಲನೆ
ಸಕಲೇಶಪುರ: ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸ್ಥಾನ ಗಳಿಸುವುದರ ಜೊತೆಗೆ ಪ್ರಸಿದ್ಧಿ ಪಡೆಯ ಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥ್ಥಿಗಳು ಪ್ರಯತ್ನ ನಡೆಸಬೇಕು ಎಂದು ಜಿಪಂ ಸದಸ್ಯೆ ಮಂಜಮ್ಮ ಹೇಳಿದರು.ಪಟ್ಟಣದ ಸುಭಾಷ್ ಮೈದಾನದಲ್ಲಿ ಶಿಕ್ಷಣ ಇಲಾಖೆ, ಜಿಪಂ, ತಾಪಂ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 2013-14 ನೇ ಸಾಲಿನ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.ದುಶ್ಚಟಗಳಿಂದ ಯುವ ಜನಾಂಗವನ್ನು ದೂರವಿರಿಸಿ ಉತ್ತಮ ಆರೋಗ್ಯ ಹೊಂದುವ ನಿಟ್ಟಿನಲ್ಲೂ ಕ್ರೀಡೆ ಅತ್ಯಾವಶ್ಯಕ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದರು.ತಾಪಂ ಇ.ಓ ಸಿದ್ದರಾಜು, ಬಿಇಓ ಪ್ರಕಾಶ್ ಶಿಕ್ಷಣ ಸಂಯೋಜಕ ಸುಬ್ರಮಣ್ಯ, ದೈಹಿಕ ಶಿಕ್ಷಕ ಮೊಗವೀರ್ ಇತರರು ಇದ್ದರು.ಕ್ರೀಡಾಕೂಟದ ಪುರಷರ ವಿಭಾಗ ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಶುಕ್ರವಾರಸಂತೆಯ ಮಿಥುನ್, ವಿಜಯಕುಮಾರ್ ಹಾಗೂ ತೃತೀಯ ಸ್ಥಾನವನ್ನು ಮಂಜುನಾಥ್ ಪಡೆದುಕೊಂಡರು.
ಬಾಲಕಿಯರ ವಿಭಾಗದ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸೀಮಾ, ದ್ವಿತೀಯ ಸ್ಥಾನ ನಿಶ್ಚೀತ ಹಾಗೂ ತೃತೀಯ ಸ್ಥಾನವನ್ನು ಯಶೋಧ ಪಡೆದರು. 1500 ಮೀಟರ್ ಬಾಲಕರ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕುಡಗರಹಳ್ಳಿಯ ನವೀನ್ಕುಮಾರ್, ದ್ವಿತೀಯ ಸ್ಥಾನವನ್ನು ಬಾಗೆ ಶಾಲೆಯ ವಿಜಯಕುಮಾರ್ ಹಾಗೂ ತೃತೀಯ ಸ್ಥಾನವನ್ನು ಸಾಗರ್ ಪಡೆದುಕೊಂಡರು. ಬಾಲಕಿಯರ ಗುಂಡು ಎಸೆತದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶಿಲ್ಪ, ದ್ವಿತೀಯ ಸ್ಥಾನ ಸುಶ್ಮಿತಾ ಹಾಗೂ ತೃತೀಯ ಸ್ಥಾನ ನಿಷ್ಮಿತ ಪಡೆದರು.
ಕೆನರಾ ಆರೋಗ್ಯ ತಪಾಸಣೆ ಶಿಬಿರ
ಹೊಳೆನರಸೀಪುರ: ಕೆನರಾಬ್ಯಾಂಕ್ ಮೈಸೂರು ವೃತ್ತ ಕಚೇರಿ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆ, ಜೋಡಿಗುಬ್ಬಿ ವಿಪ್ರವೃಂದ ಆಶ್ರಯದಲ್ಲಿ ತಾಲೂಕು ಜೋಡಿಗುಬ್ಬಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿತ್ತು. ಕೆನರಾಬ್ಯಾಂಕ್ ನಿವೃತ್ತ ಮಹಾಪ್ರಬಂಧಕ ಎನ್. ಎಸ್. ಶ್ರೀನಾಥ್ ಮಾತನಾಡಿ, ಕೆನರಾಬ್ಯಾಂಕ್ ಸಹಯೋಗದೊಂದಿಗೆ ಜೋಡಿಗುಬ್ಬಿ ವಿಪ್ರವೃಂದ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಮೆಚ್ಚತಕ್ಕ ಅಂಶ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮೈಸೂರು ವೃತ್ತ ಕಚೇರಿಯ ಉಪಮಹಾಪ್ರಬಂಧಕ ಡಾ. ಎಸ್.ಟಿ. ರಾಮಚಂದ್ರ ಮಾತನಾಡಿ, 107 ನೇ ವರ್ಷಕ್ಕೆ ಕಾಲಿಟ್ಟಿರುವ ಕೆನರಾಬ್ಯಾಂಕ್ ದೇಶದ ಮುಂಚೂಣಿ ಬ್ಯಾಂಕುಗಳಲ್ಲಿ ಒಂದಾಗಿದ್ದು ಗ್ರಾಮೀಣ ಜನತೆಗಾಗಿ ಹಲವಾರು ಯೋಜನೆಗಳನ್ನು ಕೈಗೊಂಡಿದೆ ಎಂದು ತಿಳಿಸಿದರು. ಪ್ರಸ್ತುತ ಆರೋಗ್ಯ ತಪಾಸಣಾ ಶಿಬಿರ ಬ್ಯಾಂಕಿನ ಸಾಮಾಜಿಕ ಕಾರ್ಯಕ್ರಮವಾಗಿದ್ದು ಇದರ ಸದುಪಯೋಗವನ್ನು ಜೋಡಿಗುಬ್ಬಿ ಗ್ರಾಮದ ಜನತೆ ಪಡೆಯಬೇಕೆಂದು ಕೋರಿದರು. ತಹಸೀಲ್ದಾರ್ ಪ್ರಸನ್ನಮೂರ್ತಿ ಕೆನರಾಬ್ಯಾಂಕ್ನ ಸಾಮಾಜಿಕ ಕಳಕಳಿ ಶ್ಲಾಘಿಸಿದರು.ಕೆನರಾಬ್ಯಾಂಕಿನ ಹಾಸನ ಲೀಡ್ ಬ್ಯಾಂಕ್ ಕಚೇರಿಯ ಹಿರಿಯ ಪ್ರಬಂಧಕ ಸಿ.ಎಸ್. ಶ್ರೀಕಂಠಸ್ವಾಮಿ ನಿರೂಪಿಸಿದರು. ಜೋಡಿಗುಬ್ಬಿ ಹಾಗೂ ಸುತ್ತಮುತ್ತಲ ಗ್ರಾಮಗಳ 600ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಕೆನರಾಬ್ಯಾಂಕ್ ಹಾಸನ ಶಾಖೆಯ ಮುಖ್ಯ ಪ್ರಬಂಧಕ ಕೆ .ಮಂಜುನಾಥ್, ಹಿರಿಯ ಪ್ರಬಂಧಕ ಎ. ಮಂಜುನಾಥ್,ಜೋಡಿಗುಬ್ಬಿ ವಿಪ್ರವೃಂದದ ಸದಸ್ಯರು, ಜಯಚಾಮರಾಜೇಂದ್ರ ಆಸ್ಪತ್ರೆಯ ವೈದ್ಯರ ತಂಡದ ಸದಸ್ಯರು, ಜೋಡಿಗುಬ್ಬಿ ಸರ್ಕಾರಿ ಪ್ರೌಢಶಾಲೆಯ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ತ್ರಿವಳಿ ಜನನ
ಹಾಸನ: ಬೇಲೂರು ತಾಲೂಕಿನ ಗರ್ಭಿಣಿಯೊಬ್ಬರು ತ್ರಿವಳಿ ಮಕ್ಕಳಿಗೆ ಗುರುವಾರ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ಾಲೂಕಿನ ಬಾಳೇಮನೆ ಗ್ರಾಮದ ಚಂದ್ರಶೇಖರ್ ಪತ್ನಿ ಸುಜಾತ ಚೊಚ್ಚಲ ಹೆರಿಗೆಯಲ್ಲೇ ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಸುಜಾತ- ಚಂದ್ರಶೇಖರ್ ಮದುವೆಯಾಗಿದೆ. ತಾಯಿ ಮಕ್ಕಳು ಆರೋಗ್ಯದಿಂದ ಇದ್ದಾರೆ ಎಂದು ಜಿಲ್ಲಾಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ನವಜಾತ ಶಿಶುಗಳನ್ನು ತೀವ್ರ ಘಟಕದಲ್ಲಿ ಇಡಲಾಗಿದೆ.