'ದುಷ್ಟ ಶಿಕ್ಷೆ, ಶಿಷ್ಟ ರಕ್ಷೆಶ್ರೀಕೃಷ್ಣ ಸಂದೇಶ'
ಆಲೂರು: ಪ್ರಪಂಚದಲ್ಲಿ ಕೆಡುಕು ಉಂಟಾದಾಗ ಅದನ್ನು ನಿವಾರಿಸಲು ಆಯಾ ಸಂದರ್ಭದಲ್ಲಿ ಅವತಾರವೆತ್ತಿ ಜಗತ್ತನ್ನು ಸನ್ಮಾರ್ಗದೆಡೆಗೆ ನಡೆಸಲು ಕೃಷ್ಣ ಅವತಾರ ಎತ್ತಿ ಬರುತ್ತಾರೆ ಎಂದು ಶಿಕ್ಷಕ ಬಿ.ಆರ್.ಸಿ. ರವಿಪ್ರಕಾಶ್ ಅಭಿಪ್ರಾಯಪಟ್ಟರು.
ಪಟ್ಟಣದ ಎನ್.ಹೆಚ್.ಪಿ.ಎಸ್.ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷ್ಣನು ದುಷ್ಟ ಕೌರವರನ್ನು ನಾಶ ಮಾಡಲು ಶಿಷ್ಟರಾದ ಪಾಂಡವರ ಪರವಾಗಿ ನಿಂತ ಕಾರಣವೇನೆಂದರೆ ಪ್ರಪಂಚದಲ್ಲಿ ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗಾಗಿ ಪರಮಾತ್ಮನು ಆಯಾ ಕಾಲದಲ್ಲಿ ಅವತಾರ ಎತ್ತುತ್ತಾನೆಂದು ತಿಳಿಸಿದರು.
ಎಚ್.ವಿ. ರಾಘವೇಂದ್ರ ಮಾತನಾಡಿ, ಕೃಷ್ಣ ಲೀಲೆಗಳು ಅಪಾರವಾಗಿದ್ದು ಆತ ಬಾಲ್ಯದಿಂದ ಹಿಡಿದು ಜೀವನ ಪರ್ಯಂತ ಮಾಡಿದ ಕೆಲಸ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ ಎಂದರು.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವಾಸುದೇವ್ ಮಾತನಾಡಿ, ಮಕ್ಕಳು ಕೃಷ್ಣ ವೇಷಧಾರಿಗಳಾಗಿರುವುದು ಅತ್ಯಂತ ಸಂತಸ ತಂದಿದೆ. ಮಕ್ಕಳಲ್ಲಿ ಈ ರೀತಿಯ ಚಟುವಟಿಕೆ ನಡೆಯಲು ಪೋಷಕರು ಕಾಳಜಿ ವಹಿಸಬೇಕೆಂದರು.
ಪಟ್ಟಣ ಪಂಚಾಯ್ತಿ ಸದಸ್ಯೆ ನಾಗರತ್ನ, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಗೋಪಾಲ ಕೃಷ್ಣ, ಗುಲಾಂ ಸತ್ತಾರ್ ಇತರರು ಇದ್ದರು. ಪ್ರಭಾರಿ ಮುಖ್ಯ ಶಿಕ್ಷಕ ಎ.ಟಿ.ಮಲ್ಲೇಸ್ ನಿರೂಪಿಸಿ, ಶಿಕ್ಷಕಿ ಹೆಪ್ಸಿಬಾ ಸ್ವಾಗತಿಸಿ, ಶಿಕ್ಷಕ ವೆಂಕಟರಂಗಯ್ಯ ವಂದಿಸಿದರು.
ಕೃಷ್ಣ ವೇಷಧಾರಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಸಾಕಿಯ ಬಾನು, ಹರ್ಷನಾಯಕ್, ಮೋಹಿತ್‌ಗೆ ಇದೆ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.