ನಾಳೆ ಬೆಟ್ಟದ ಗುಳ್ಳದಪುರ ವೆಂಕಟರಮಣ ಜಾತ್ರೆ
ಹಾಸನ: ಹೊಳೆನರಸೀಪುರ ತಾಲೂಕು ಬೆಟ್ಟದ ಗುಳ್ಳದಪುರ ಗ್ರಾಮದಲ್ಲಿ ವೆಂಕಟರಮಣಸ್ವಾಮಿ ದೇವಸ್ಥಾನದ ಜಾತ್ರೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭ ಆ.31 ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ.
ರಸ್ತೆ ಕಾಮಗಾರಿಯ ಭೂಮಿ ಪೂಜೆಯನು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಹಾಗೂ ಕಿರು ನೀರಾವರಿ ಸರಬರಾಜು ಯೋಜನೆ ಉದ್ಘಾಟನೆಯನ್ನು ಶಾಸಕ ಎಚ್.ಡಿ. ರೇವಣ್ಣ ನೆರವೇರಿಸುವರು. ಭಾರತೀಯ ತಂಬಾಕು ಮಂಡಳಿ ಉಪಾಧ್ಯಕ್ಷ, ಶಾಸಕ ಎ.ಮಂಜು ಅಧ್ಯಕ್ಷತೆ ವಹಿಸುವರು.
ಮುಜರಾಯಿ ಸಚಿವ ಪ್ರಕಾಶ ಹುಕ್ಕೇರಿ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಪಂ ಮುಖ್ಯ ಸಿಇಒ ಯು.ಪಿ. ಸಿಂಗ್, ಹೊಳೆನರಸೀಪುರ ತಹಸೀಲ್ದಾರ್ ಕೆ. ಎಸ್.ಮಂಜುಳಾ ಮತ್ತಿತರರು ಪಾಲ್ಗೊಳ್ಳುವರು
ಅದು ವೆಂಕಟರಮಣಸ್ವಾಮಿ ದೇವಸ್ಥಾನ: ಕಣ್ಮನ ಸೆಳೆಯುವ ಸುಂದರ ನಿಸರ್ಗ ಮಧ್ಯದಲ್ಲಿದೆ ಬೆಟ್ಟದ ಗುಳ್ಳದಪುರದ ವೆಂಕಟರಮಣಸ್ವಾಮಿ ದೇವಸ್ಥಾನ. ಹಚ್ಚ ಹಸಿರಿನ ಮಧ್ಯದ ಅರಣ್ಯ ಪ್ರದೇಶದಲ್ಲಿರುವ ಈ ದೇವಸ್ಥಾನಕ್ಕೆ ನಿಸರ್ಗದ ಸೌಂದರ್ಯ ಸವಿಯುತ್ತ ಹೋಗುವುದೇ ಒಂದು ಸುಂದರ ಅನುಭವ.
ಶ್ರಾವಣ ಮಾಸದ ಕೊನೆ ಶನಿವಾರ ಈ ಬೆಟ್ಟದ ಗುಳ್ಳದಪುರದ ಜಾತ್ರೆ ಪ್ರತಿ ವರ್ಷ ನಡೆಯುತ್ತದೆ. ಅದರಂತೆ ಈ ಬಾರಿಯೂ ಸಂಪ್ರದಾಯದಂತೆ ಕೊನೆಯ ಶ್ರಾವಣ ಶನಿವಾರ ಜಾತ್ರೆಯನ್ನು ಸಹ ವಿಜೃಂಭಣೆಯಿಂದ ನಡೆಸಲು ಭಕ್ತರು ನಿರ್ಧರಿಸಿದ್ದಾರೆ.
ದೊಡ್ಡಕಾಡನೂರು ಬಳಿಯ ದೊಡ್ಡ ದೇವಸ್ಥಾನ: ಈ ಬೆಟ್ಟದ ಗುಳ್ಳದಪುರ ಗ್ರಾಮ ಇರುವುದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ದೊಡ್ಡಕಾಡನೂರು ಬಳಿ. ಇಲ್ಲಿನ ವೆಂಕಟರಮಣಸ್ವಾಮಿ ದೇವಸ್ಥಾನ ನಿರ್ಮಾಣಗೊಂಡಿರುವುದು 13ನೇ ಶತಮಾನದಲ್ಲಿ. ರಾಮಾನುಜರ ಮಾರ್ಗದರ್ಶನದಲ್ಲಿ ಚಿಕ್ಕ ಕಾಡಯ್ಯ ಹಾಗೂ ದೊಡ್ಡಕಾಡಯ್ಯ ಎಂಬ ಪಾಳೇಗಾರ ಸಹೋದರರು ಈ ದೇವಸ್ಥಾನ ನಿರ್ಮಿಸಿದರೆಂಬ ಪ್ರತೀತಿ ಇದೆ. ಪಾಳೇಗಾರ ದೊಡ್ಡ ಕಾಡಯ್ಯ ಆಳ್ವಿಕೆಯಿಂದಾಗಿ ಈ ಗ್ರಾಮಕ್ಕೆ ದೊಡ್ಡಕಾಡನೂರು ಎಂಬ ಹೆಸರು ಬಂದಿದೆ. ದೊಡ್ಡಕಾಡನೂರಿನಲ್ಲಿ ಪಾಳೆಗಾರ ಚಿಕ್ಕ ಕಾಡಯ್ಯ ನಿರ್ಮಿಸಿರುವ ಆಂಜನೇಯ ದೇವಸ್ಥಾನ ಹಾಗೂ ಈಶ್ವರ ದೇವಸ್ಥಾನಗಳೂ ಪ್ರಸಿದ್ಧಿ ಪಡೆದಿವೆ.
ಜಾತ್ರೆ ಜೊತೆಗೆ ವೈಕುಂಠ ಏಕಾದಶಿ: ಬೆಟ್ಟದ ಗುಳ್ಳದಪುರದ ವೆಂಕಟರಮಣ ದೇವಸ್ಥಾನದಲ್ಲಿ ಹಲವಾರು ತಲೆಮಾರುಗಳಿಂದ ಈ ಗ್ರಾಮದವರು ಪೂಜೆ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ದೇವಸ್ಥಾನದಲ್ಲಿ ಪೂಜೆ, ಹವನ, ಯಜ್ಞ ಸೇರಿದಂತೆ ಎಲ್ಲ ಸಂಪ್ರದಾಯಗಳೂ ದೊಡ್ಡ ಕಾಡನೂರಿನವರಿಂದಲೇ ನಡೆಯುತ್ತಿದ್ದವು. ಇದೀಗ ಬೆಟ್ಟದ ಗುಳ್ಳದಪುರದ ಭಕ್ತರೇ ಇಲ್ಲಿ ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ಜಾತ್ರೆಯ ಜೊತೆಗೆ ವೈಕುಂಠ ಏಕಾದಶಿ, ಲಕ್ಷದೀಪೋತ್ಸವವೂ ಇಲ್ಲಿ ನಡೆಯುತ್ತವೆ.
ನಿಸರ್ಗ ಪ್ರಿಯರನು ಕೈಬೀಸಿ ಕರೆಯುವಂತಿದೆ: ತಳಮಟ್ಟದಿಂದ ಸುಮಾರು ಒಂದು ಸಾವಿರ ಎತ್ತರ ಪ್ರದೇಶದಲ್ಲಿರುವ ಈ ದೇವಸ್ಥಾನ ನಿಸರ್ಗ ಪ್ರಿಯರನು ಕೈಬೀಸಿ ಕರೆಯುವಂತಿದೆ. ಬೆಟ್ಟದ ಮೇಲೆ ಏರಿ, ದೇವಸ್ಥಾನ ತಲುಪಿದರೆ ಮೈಮನಸ್ಸಿಗೆ ತಂಗಾಳಿ ಮುದ ನೀಡುತ್ತದೆ. ಸುತ್ತಲೂ ಕಾಣುವ ಹಸಿರಿನ ಸಿರಿ ಜೀವನದ ಜಂಜಾಟ ಮರೆಸುವಂತಿದೆ. ಇದೇ ಕಾರಣಕ್ಕೆ ಜಾತ್ರೆ, ಹಬ್ಬ-ಹರಿದಿನಗಳಲ್ಲದೇ ನಿತ್ಯವೂ ಬೇರೆ ಬೇರೆ ಪ್ರದೇಶಗಳಿಂದ ಜನರು ಈ ಬೆಟ್ಟ ಏರಿ, ವೆಂಕಟರಮಣಸ್ವಾಮಿ ದರ್ಶನ ಪಡೆಯುತ್ತಾರೆ.
ಸಮಸ್ಯೆ ಮಾತ್ರ ಹಾಗೆಯೇ ಇದೆ: ಸುಂದರ ದೇವಸ್ಥಾನ ತಲುಪಲು ರಸ್ತೆ ಮಾತ್ರ ಸಮರ್ಪಕವಾಗಿಲ್ಲ. ಗ್ರಾಮಸ್ಥರೆಲ್ಲ ಸೇರಿ ತಾತ್ಕಾಲಿಕ ರಸ್ತೆ ನಿರ್ಮಿಸಿದ್ದಾರೆ. ಕಾರುಗಳು ಬೆಟ್ಟ ಏರಲು ಅನುಕೂಲವಾಗುವಂಥ ರಸ್ತೆ ಏನೋ ನಿರ್ಮಾಣಗೊಂಡಿದೆಯಾದರೂ ಇದು ತಾತ್ಕಾಲಿಕ. ನೀರಿಗಾಗಿ ಹೇಮಾವತಿ ನಾಲೆ ನಿರ್ಮಾಣಗೊಂಡು 30 ವರ್ಷ ಕಳೆದರೂ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲ.
ಈ ನಿಟ್ಟಿನಲ್ಲಿ ಇದೀಗ ರಾಜ್ಯ ಸರ್ಕಾರ ಈ ಬೆಟ್ಟದಲ್ಲಿರುವ ೆಂಕಟರಮಣ ದೇವಸ್ಥಾನ ತಲುಪಲು ಗುಣಮಟ್ಟದ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಸೌಲಭ್ಯ ನಿರ್ಮಿಸಲು ಮುಂದಾಗಿದೆ. ಇದೇ ಕಾರಣಕ್ಕಾಗಿ ಜಾತ್ರೆ ನಡೆಯಲಿರುವ ಆ.30 ರಂದು ಕಾಮಗಾರಿಗಳಿಗೆ ಸಚಿವ ಎಚ್.ಕೆ. ಪಾಟೀಲ ಹಾಗೂ ಶಾಸಕ ಎಚ್.ಡಿ. ರೇವಣ್ಣ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ನಿತ್ಯವೂ ನೂರಾರು ಜನ: ಬೆಟ್ಟದ ಗುಳ್ಳದಪುರದ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಆ.31ಕ್ಕೆ ಜಾತ್ರೆ. ನಿಸರ್ಗದ ಸವಿ ಸವಿಯುವುದಕ್ಕಾಗಿಯೇ ನಿತ್ಯವೂ ಈ ಬೆಟ್ಟಕ್ಕೆ ಬರುವ ನೂರಾರು ಜನರು, ಜಾತ್ರೆ ದಿನದಂದು ಸಹಸ್ರ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಹತ್ತಾರು ಸೌಲಭ್ಯಗಳ ಕೊರತೆ ಮಧ್ಯೆಯೇ ಬೆಟ್ಟಕ್ಕೆ ಬರುತ್ತಿದ್ದ ಭಕ್ತರಿಗಾಗಿ ರಸ್ತೆ ನಿರ್ಮಾಣ ಹಾಗೂ ಇನಿತರ ಕಾಮಗಾರಿಗಳ ನಿರ್ಮಾಣ ಈ ವರ್ಷದಿಂದ ಪ್ರಾರಂಭಗೊಳ್ಳಲಿವೆ.