ಬಾಗಿನ ಅರ್ಪಣೆ ತಂದ ಘರ್ಷಣೆ
ಬೇಲೂರು: ಯಗಚಿ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಬಾಗಿನ ಅರ್ಪಿಸಲು ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಬಾಗಿನ ಅರ್ಪಿಸಲಾಯಿತು.
ಬೇಲೂರು ಯಗಚಿ ಜಲಾಶಯ ಭರ್ತಿಯಾಗಿ ತಿಂಗಳು ಕಳೆದರೂ, ಜಿಲ್ಲಾ ಉಸ್ತುವಾರಿ ಸಚಿವರು ಬಾಗಿನ ಅರ್ಪಿಸಲು ಹಿಂದೇಟು ಹಾಕುತ್ತಿರುವ ಬುಧವಾರ ರೈತ ಸಂಘ, ಜಯ ಕರ್ನಾಟಕ ಸಂಘಟನೆ, ದಲಿತ ಸಂಘರ್ಷ ಸಮಿತಿ ಮುಖಂಡರು ಜಲಾಶಯಕ್ಕೆ ಬಾಗಿನ ಅರ್ಪಿಸಲು ತೆರಳಿದರು.
ಈ ಸಂದರ್ಭದಲ್ಲಿ ಜಲಾಶಯದಲ್ಲಿ ಬಾಗಿನ ಅರ್ಪಿಸಬಾರದು ಎಂದು ಜಲಾಶಯದ ಅಧಿಕಾರಿಗಳು ಮತ್ತು ಪೊಲೀಸರು ತಡೆವೊಡಿದ್ದರು. ನಂತರ ಅಧಿಕಾರಿ ಬಾಗಿನ ಬಿಡದಂತೆ ಮನವೊಲಿಸಿದರೂ ಪ್ರಯೋಜನವಾಗಲಿಲ್ಲ. ಜಲಾಶಯದಲ್ಲಿ ಸಂಘಟನೆಗಳ ನೇತೃತ್ವದಲ್ಲಿ ಬಾಗಿನ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಎಂಜಿನಿಯರ್, ಪೊಲೀಸರು ಮತ್ತು ಸಂಘಟಕರ ನಡುವೆ ಮಾತಿನ ಚಕಮಕಿ ನಡೆಯಿತು.
ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಪ್ರಗತಿ ಪರ ಸಂಘಟನೆಯ ಅಧ್ಯಕ್ಷ ಸುದರ್ಶನ್ ಜಲಾಶಯದ ತುಂಬಿದ ನಂತರ ಬಾಗಿನ ಅರ್ಪಿಸುವುದು ಪದ್ದತಿ. ಅದರೆ,ಇಲ್ಲಿಯವರೆಗೂ ಯಾರು ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬಾಗಿನ ಅರ್ಪಿಸಲಾಯಿತು ಎಂದರು.
ಯಗಚಿ ಜಲಾಶಯ ಸಹಾಯಕ ಕಾರ್ಯಪಾಲ ಎಂಜಿನಿಯರ್ ಪುಟ್ಟೇಗೌಡ ಮಾತನಾಡಿ, ಬಾಗಿನ ಅರ್ಪಿಸಲು ಯಾವುದೇ ಅನುಮತಿ ಪಡೆದಿಲ್ಲ.
ಏಕಾಏಕಿ ಜಲಾಶಯದೊಳಗೆ ಅಕ್ರಮ ಪ್ರವೇಶ ಮಾಡಿದ್ದಾರೆ. ಇದರ ಬಗ್ಗೆ ಮೇಲಾಧಿಕಾರಿಗಳಿಗೆ ವಿವರ ನೀಡಲಾಗಿದೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಪರಮೇಶ್,ರೈತ ಸಂಘದ ಕಾರ್ಯದರ್ಶಿ ಸ್ವಾಮಿಗೌಡ, ಜಯಕರ್ನಾಟಕ ಯುವ ಅಧ್ಯಕ್ಷ ಶಿವರಾಜ್, ಕುಮಾರ್, ಪುರಸಭೆ ಮಾಜಿ ಸದಸ್ಯೆ ನಾಗಮ್ಮ ಮತ್ತಿತರರು ಉಪಸ್ಥಿತರಿದ್ದರು.
ರು. 6 ಲಕ್ಷ ಮೌಲ್ಯದ ಗಾಂಜಾ ವಶ
ಬೇಲೂರು: ತಾಲೂಕಿನ ನಿಟ್ಟೂರು ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಸುಮಾರು 6 ಲಕ್ಷಮೌಲ್ಯದ ಗಾಂಜಾ ಗಿಡ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಅಧರಿಸಿ ಬೇಲೂರು ಪೊಲೀಸರು ಬುಧವಾರ ಮಧ್ಯಾಹ್ನ ಪಟ್ಟಣದಿಂದ 5 ಕಿ.ಮೀ. ದೂರದಲ್ಲಿರುವ ನಿಟ್ಟೂರು ಗ್ರಾಮದ ಈರೇಗೌಡ ಎಂಬುವರಿಗೆ ಸೇರಿದ ಜಮೀನಿಗೆ ತೆರಳಿದಾಗ ಗಾಂಜಾ ಗಿಡ ಪತ್ತೆಯಾಯಿತು. ಜಮೀನಿನಲ್ಲಿ ಜೋಳ, ಕಬ್ಬಿನ ಮಧ್ಯೆ ಸಾಲಾಗಿ ಗಾಂಜಾ ನೆಡಲಾಗಿತ್ತು. ನಂತರ ಶೋಧ ನಡೆಸಿದ್ದಾಗ ಜಮೀನು ಮತ್ತು ಈರೇಗೌಡ ಮನೆಯ ಸುತ್ತ ಮುತ್ತ ಸೇರಿ ದೊಡ್ಡದಾದ 30ಗಿಡ, ಸಣ್ಣಗಾತ್ರದ 75ಗಿಡ, ಮತ್ತು ಒಣಗಿಸಿದ ಗಿಡಗಳು ಪತ್ತೆಯಾಯಿತು. ವಶಪಡಿಸಿಕೊಂಡ ಗಾಂಜಾಗಿಡದ ಮೌಲ್ಯ ರು. 6 ಲಕ್ಷ ಎಂದು ಅಂದಾಜು ಮಾಡಲಾಗಿದೆ. ಬೇಲೂರು ಸಿಪಿಐ ಶ್ರೀಕಾಂತ್, ವೈದ್ಯಾಧಿಕಾರಿ ನರಸೇಗೌಡ, ಪಿಎಸೈ ಆಶ್ವಿನ್ ಕುಮಾರ್, ದೇವರಾಜು,ಮಹೇಶ್, ಹನುಮಂತ ಮತ್ತಿತರೆ ಸಿಬ್ಬಂದಿ ಇದ್ದರು.