ಮಗುವಿನ ಶಿಕ್ಷಣ ಜನ್ಮಸಿದ್ಧ ಹಕ್ಕಿಗಾಗಿ ಅಕ್ಷರ ದಾಸೋಹ ನೌಕರರ ಸಮ್ಮೇಳನ
ಹಾಸನ: ಪ್ರತಿ ಮಗುವಿಗೆ ಶಿಕ್ಷಣದ ಜನ್ಮಸಿದ್ಧ ಹಕ್ಕಿಗಾಗಿ, ನೌಕರರ ಕನಿಷ್ಠ ಕೂಲಿ ಹಾಗೂ ಸೇವಾ ನಿಯಮಾವಳಿಗಳಿಗೆ ಒತ್ತಾಯಿಸಿ ಅಕ್ಷರ ದಾಸೋಹ ನೌಕರರ 3ನೇ ರಾಜ್ಯ ಸಮ್ಮೇಳನ ಆ.31 ರಿಂದ ಸೆ. 2ರ ವರೆಗೆ 3 ದಿನಗಳವರೆಗೆ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಅರವಿಂದ್ ತಿಳಿಸಿದ್ದಾರೆ.
ದೇಶದ ಮೂಲ ಬೆಳವಣಿಗೆಯ ತಳಹದಿ ಶಿಕ್ಷಣ ಇಂತಹ ಶಿಕ್ಷಣವನ್ನು ಪ್ರತಿಯೊಂದು ಮಗುವು ಪಡೆದುಕೊಳ್ಳುವುದು ಮೂಲಭೂತ ಹಕ್ಕು. ಆದರೆ ಈ ಹಕ್ಕನ್ನು ಚಲಾಯಿಸಲು ಹಲವಾರು ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಇಂದಿನ ನಿರುದ್ಯೋಗ, ಅರೆ ಉದ್ಯೋಗ, ಬಡತನದಿಂದಾಗಿ ಎಲ್ಲಾ ಮಕ್ಕಳಿಗೂ ಸಮಾನತೆಯ ಶಿಕ್ಷಣ ಸಿಗುತ್ತಿಲ್ಲ. ಉಳ್ಳವರಿಗೆ ಮಾತ್ರ ಉನ್ನತ ಶಿಕ್ಷಣವಾಗುತ್ತಿದೆ ಎಂದು ಹೇಳಿದ್ದಾರೆ.
ಇಂತಹ ಮಹತ್ವದ ಉದ್ದೇಶವನ್ನು ಈ ಯೋಜನೆ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಗ್ರಾಮೀಣ, ಸಂತ್ರಸ್ತ, ಹಿಂದುಳಿದ ಮಹಿಳೆಯರಿಗೂ ಉದ್ಯೋಗ ನೀಡುವುದು ಒಂದು ಪ್ರಮುಖಾಂಶ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 65 ಲಕ್ಷ ಮಕ್ಕಳಿಗೆ 1,05,209 ಮಹಿಳೆಯರು ಅಡುಗೆ ಮಾಡಿ ಬಿಸಿಯೂಟ ಬಡಿಸುತ್ತಿದ್ದಾರೆ ಎಂದರು.
ಮಹಿಳೆಯರ ಪರಿಸ್ಥಿತಿ: ಸುಮಾರು 11 ವರ್ಷಗಳಿಂದ ದುಡಿಯುತ್ತಿರುವ ಇವರು ಬೆಂಕಿಯ ಮುಂದೆ ಕೆಲಸ ಮಾಡುತ್ತಾರೆ. ಅಲ್ಲಿ ಏನೇ ಅನ್ಯಾಯ ನಡೆದರೂ ಅದನ್ನು ವೈಯಕ್ತಿಕವಾಗಿ ಅನುಭವಿಸಬೇಕಾಗಿದೆ. ಈಗಾಗಲೇ 3 ಜನ ಅಡುಗೆಯವರು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಮರಣ ಹೊಂದಿದ್ದಾರೆ. ನೂರಾರು ಜನರು ದೇಹದ ವಿವಿಧ ಭಾಗಗಳನ್ನು ಸುಟ್ಟುಕೊಂಡಿದ್ದಾರೆ. ಕೆಲಸದ ಭದ್ರತೆ ಇಲ್ಲದೇ ಇರುವುದರಿಂದ ಎಲ್ಲಾ ರೀತಿಯ ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಓಲೈಕೆ ಮಾಡಿಕೊಂಡೇ ಕೆಲಸ ಮಾಡಬೇಕು. ಸಣ್ಣ ಪುಟ್ಟ ತಪ್ಪುಗಳಾದರೂ ಕೂಡಲೇ ಕೆಲಸದಿಂದ ತೆಗೆಯುವುದು, ಕೆಲಸಕ್ಕೆ ಯಾರಾದರೂ ಉದ್ಯೋಗಾಕಾಂಕ್ಷಿಗಳು ಇದ್ದರೂ ಇವರನ್ನು ಕೆಲಸದಿಂದ ತೆಗೆಸುವ ಪ್ರಕ್ರಿಯೆ ನಡೆದೇ ಇದೆ ಎಂದು ದೂರಿದರು. ಇದರಿಂದ 20 ಸಾವಿರ ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ. 300 ರುನಿಂದ ರು.1000 ಸಂಭಾವನೆ ಹೆಚ್ಚಿಸಿ ಅಡುಗೆ ಕೆಲಸಗಾರರು ಹೆಚ್ಚಾಗಿದ್ದಾರೆ ಎಂದು ಸಾವಿರಾರು ಜನರನ್ನು ಕೆಲಸದಿಂದ ತೆಗೆದಿದ್ದಾರೆ. ರೋಸ್ಟರ್ಪ್‌ದ್ಧತಿಯನ್ನು ಈಗ ಅನುಸರಿಸುತ್ತಿರುವುದರಿಂದ 11 ವರ್ಷಗಳಿಂದ ಕೆಲಸ ಮಾಡುತ್ತಿರುವ ಇವರನ್ನು ಯಾವುದೇ ಮುಲಾಜಿಲ್ಲದೆ ಕೆಲಸದಿಂದ ತೆಗೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮ್ಮೇಳನಕ್ಕೆ ಹಾಸನ ಜಿಲ್ಲೆಯಿಂದ ಸುಮಾರು 50 ಜನ ಪ್ರತಿನಿಧಿಗಳು ಹಾಗೂ 31 ರಂದು ನಡೆಯುವ ನೌಕರರ ರ್ಯಾಲಿಗೆ 500 ಜನ ಭಾಗವಹಿಸಲಿದ್ದಾರೆ. ಆದ್ದರಿಂದ 30ರಂದು ಶುಕ್ರವಾರ ಸಂಜೆ 6 ಕ್ಕೆ ಹಾಸನದ ರೇಲ್ವೆ ನಿಲ್ದಾಣದ ಬಳಿ ಬಂದು ಸೇರಬೇಕೆಂದು ಕೋರಿದ್ದಾರೆ.