ಸಾಲ ಅರ್ಜಿ ವಿತರಣೆಯಲ್ಲಿ ತಾರತಮ್ಯ ಖಂಡಿಸಿ ಧರಣಿ
ಸಕಲೇಶಪುರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕ ದುರ್ಬಲ ಫಲಾನುಭವಿಗಳಿಗೆ ನೀಡುತ್ತಿರುವ ಸಾಲ ಸೌಲಭ್ಯದ ಅರ್ಜಿ ಫಾರಂ ವಿತರಣೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ ಫಲಾನುಭವಿಗಳು ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಾಂತಕುಮಾರ್ ಫಲಾನುಭವಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಅರೋಪಿಸಿದ ಪ್ರತಿಭಟನಾಕಾರರು, ದಿನನಿತ್ಯ ವಿತರಿಸಬೇಕಾದ ಅರ್ಜಿಯನ್ನು ಗುರುವಾರ ಮಾತ್ರ ವಿತರಿಸುತ್ತಾರೆ. ಮಾತ್ರವಲ್ಲ, ಜನರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಅರೋಪಿಸಿದರು. ಅಧಿಕಾರಿ ಶಾಂತಕುಮಾರ್ ಅವರನ್ನು ಬದಲಾಯಿಸಿ ಬೇರೆ ಅಧಿಕಾರಿಯನ್ನು ನೇಮಿಸಬೇಕು, ಪ್ರತಿದಿನ ಅರ್ಜಿ ವಿತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು
ಅಧಿಕಾರಿ ಸ್ಪಷ್ಟನೆ: ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಾಂತಕುಮಾರ್, ಹಿಂದೆ ಸಾಲ ಪಡೆದವರಿಗೆ ಅರ್ಜಿ ವಿತರಿಸುತ್ತಿಲ್ಲ, ವಾರಕ್ಕೆ 2 ದಿನ ಅರ್ಜಿ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಲೋಕಾ ಎಸ್ಪಿ ದಿಢೀರ್ ಭೇಟಿ: ಸಿಬ್ಬಂದಿಗೆ ತರಾಟೆ
ಹಾಸನ: ನಗರದಲ್ಲಿ ಇರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ಗುರುವಾರ ಹಠಾತ್ ಭೇಟಿ ನೀಡಿದ ಲೋಕಾಯುಕ್ತ ಎಸ್ಪಿ ವೇದಮೂರ್ತಿ, ಕಚೇರಿ ಅಸಮರ್ಪಕ ಕಾರ್ಯ ವೈಖರಿ ಬಗ್ಗೆ ಅಸಮಾಧಾನಗೊಂಡ ಡಿಎಚ್‌ಒ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ಲೋಕಾಯುಕ್ತ ಎಸ್ಪಿ ತಮ್ಮ ಸಿಬ್ಬಂದಿಯೊಂದಿಗೆ ಕಚೇರಿಗೆ ಭೇಟಿ ನೀಡಿ, ಆರೋಗ್ಯಾಧಿಕಾರಿ ಶ್ಯಾಮಲದೇವಿ ಅವರನ್ನು ತರಾಟೆಗೆ ತೆಗೆದುಕೊಂಡದರು. ಇಲಾಖೆಯಲ್ಲಿ ನಾನಾ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೆಲ ಯೋಜನೆಗಳಡಿ ಬಡ ಕುಟುಂಬಗಳಿಗೆ ನೀಡಬೇಕಾದ ಹಣವನ್ನು ಸರಿಯಾದ ಸಮಯಕ್ಕೆ ನೀಡದೆ ತಡ ಮಾಡಿರುವ ಬಗ್ಗೆ ದಾಖಲೆ ಪುಸ್ತಕವನ್ನು ಪರಿಶೀಲಿಸಿದರಲ್ಲದೆ ಪ್ರಮುಖವಾದ ದಾಖಲೆ ಪರಿಶೀಲನೆ ನಡೆಸಿದರು.