ಹೊಳೆನರಸೀಪುರದಲ್ಲಿ ಓಟದ ಸ್ಪರ್ಧೆ
ಹೊಳೆನರಸೀಪುರ: ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಲು ಕೆಸರು ಗದ್ದೆಯ ಓಟ ಆಯೋಜಿಸಿರುವುದು ಶ್ಲಾಘನೀಯ ಸಂಗತಿ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು. ಕರವೇ ತಾಲೂಕು ಘಟಕ ಪಟ್ಟಣದಲ್ಲಿನ ಹುಚ್ಚನಕೊಪ್ಪಲು ಏತನೀರಾವರಿ ಯೋಜನೆಯ ಬಳಿಯಲ್ಲಿ ಆಯೋಜಿಸಿದ್ದ ಕೆಸರು ಗದ್ದೆ ಓಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಮುಂದಿನ ಪೀಳಿಗೆಗೂ ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ ಎಂದರು. ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ಕನ್ನಡಿಗನೇ ಈ ಕನ್ನಡ ನಾಡಿನಲ್ಲಿ ಸಾರ್ವಭೌಮನಾಗಿ ಬಾಳುವಂತಹ ಸ್ಥಿತಿಗೆ ರಾಜ್ಯದಲ್ಲಿನ ಎಲ್ಲಾ ಜನನಾಯಕರೂ ಪಕ್ಷಾತೀತವಾಗಿ ಒಗ್ಗೂಡಿ ಹೋರಾಡಬೇಕಿದೆ ಎಂದರು. ನಶಿಸುವ ಹಂತ ತಲುಪಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲಾ ಶಾಸಕರು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.
ಅರಕಲಗೂಡು ಕ್ಷೇತ್ರದ ಪೊಟ್ಯಾಟೋ ಕ್ಲಬ್‌ನ ಸಂಸ್ಥಾಪಕ ಯೋಗಾರವುಶ್ ಮಾತನಾಡಿ, ಆಧುನಿಕ ಕ್ರೀಡೆಗಳ ಹಾವಳಿಯಲ್ಲಿ ನಮ್ಮ ಮಣ್ಣಿನ ಸೊಗಡಿನ ಜನಪ್ರಿಯ ಗ್ರಾಮೀಣ ಕ್ರೀಡೆಗಳು ನಶಿಸದಂತೆ ಉಳಿಸಲು ಇಂದಿನ ಯುವ ಸಮುದಾಯ ಮತ್ತೆ ಗ್ರಾಮೀಣ ಕ್ರೀಡೆಗಳತ್ತ ಗಮನ ನೀಡಬೇಕಿದೆ ಎಂದು ಹೇಳಿದರು. ತಾಲೂಕು ಕರವೇಯಿಂದ ನಡೆಸಲಾದ ಕೆಸರು ಗದ್ದೆ ಓಟದಲ್ಲಿ ಓಡನಹಳ್ಳಿಯ ಬಾಬು ಪ್ರಥಮ, ಅರಕಲಗೂಡು ರಾಜೇಶ್ ದ್ವಿತೀಯ, ಹಳ್ಳಿಮೈಸೂರಿನ ಸುನೀಲ್ ತೃತೀಯ ಸ್ಥಾನವನ್ನು ಗಳಿಸಿ ನಗದು ಬಹುಮಾನ ಹಾಗೂ ಪಾರಿತೋಷಕ ಪಡೆದರು. ಕರವೇ ರಾಜ್ಯ ಉಪಾಧ್ಯಕ್ಷ ರವೀಂದ್ರಕುಮಾರ್, ಜಿಲ್ಲಾಧ್ಯಕ್ಷ ಮನುಕುಮಾರ್, ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ಮಮತ, ಬೆಂಗಳೂರು ನಗರ ಘಟಕ ಅಧ್ಯಕ್ಷ ನಾಗೇಂದ್ರಬಾಬು, ತಾಲೂಕು ಘಟಕದ ಅಧ್ಯಕ್ಷ ಕೆರಗೋಡು ಮಹೇಶ್ ಮತ್ತಿತರರು ಇದ್ದರು.