ಇನ್ನೆರಡು ದಿನಗಳಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆ: ರೇವಣ್ಣ
ಕ.ಪ್ರ.ವಾರ್ತೆ ಹಾಸನ ಆ. 31
ಇನ್ನೆರಡು ದಿನಗಳಲ್ಲಿ ಜೆಡಿಎಸ್ ನೂತನ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಮುಖಂಡ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ.
ಹೊಳೆನರಸೀಪುರ ತಾಲೂಕು ಬೆಟ್ಟದ ಗುಳ್ಳದಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯಾಧ್ಯಕ್ಷರ ಆಯ್ಕೆಯಾಗಿ ರಚಿಸಿರುವ ಕೋರ್ ಕಮಿಟಿ ಈಗಾಗಲೇ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿದೆ. ಎರಡು ದಿನಗಳಲ್ಲಿ ಹೊಸ ಅಧ್ಯಕ್ಷರನ್ನು ಪ್ರಕಟಿಸಲಾಗುವುದು. ಈ ಬಗ್ಗೆ ಯಾವುದೇ ಗೊಂದಲಗಳು ಇಲ್ಲ ಎಂದು ಸ್ವಷ್ಟಪಡಿಸಿದರು.
ದೇವೇಗೌಡರು, ಕುಮಾರಸ್ವಾಮಿ ಮತ್ತು ನಾನು ಹಿಂಬಾಗಿಲಿನಿಂದ ವಿಧಾನಸಭೆ ಪ್ರವೇಶ ಮಾಡಿಲ್ಲ. ಹೋರಾಟ ಮಾಡಿ ಚುನಾವಣೆ ಮೂಲಕ ಪ್ರವೇಶ ಮಾಡಿದ್ದೇವೆ. ಜೆಡಿಎಸ್ ಕುಟುಂಬ ಪಕ್ಷ ಎಂದು ಕರೆಯುವುದಾದರೆ ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರ ಹಿಡಿತದಲ್ಲಿ ಇರುವ ಕಾಂಗ್ರೆಸ್ ಯಾವ ರೀತಿಯ ಪಕ್ಷ ಎಂದು ತಿರುಗೇಟು ನೀಡಿದರು.
ಬೆಂಗಳೂರು ದಕ್ಷಿಣ ಲೋಕಸಭೆ ಉಪ ಚುನಾವಣೆಯಲ್ಲಿ ಮಾಜಿ ಸಚಿವ ಅಶೋಕ್ ತಮ್ಮ ಪಕ್ಷದ ಪ್ರಚಾರ ಮಾಡಿ ಎಂದು ಕೇಳಿರಲಿಲ್ಲ. ಆಡಳಿತ ಪಕ್ಷಕ್ಕೆ ಬುದ್ಧಿ ಕಲಿಸುವ ದೃಷ್ಟಿಯಿಂದ ತಾವಾಗಿಯೆ ಪ್ರಚಾರ ಮಾಡಿದ್ದರು. ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿರಲಿಲ್ಲವೇ. ಬಿಜೆಪಿಯೊಡನೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂಬುದು ಅಪ್ರಪಚಾರ. ಅಲ್ಪಸಂಖ್ಯಾತರು ಜೆಡಿಎಸ್ ಅನ್ನು ಬಿಟ್ಟಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಶೇ. 2 ರಷ್ಟು ಮೀಸಲಾತಿಯನ್ನು ಮುಸ್ಲಿಂರಿಗೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಏನು ಮಾಡಿದೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.
ಮ್ಯಾಕ್ಸಿಕ್ಯಾಬ್ - ಓಮ್ನಿ ಡಿಕ್ಕಿ: ಒಬ್ಬರಿಗೆ ಗಾಯ
ರಾಮನಾಥಪುರ: ಸಮೀಪದ ಕೊಣನೂರಿನಲ್ಲಿ ಶನಿವಾರ ಮ್ಯಾಕ್ಸಿಕ್ಯಾಬ್ ಹಾಗೂ ಮಾರುತಿ ಓಮ್ನಿ ನಡುವೆ ಮುಖ್ಯ ರಸ್ತೆಯಲ್ಲಿ ಮುಖಮುಖಿ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಅಪಘಾತದಿಂದ ರಸ್ತೆ ಸಂಚಾರ ಕೆಲ ಕಾಲ ಸ್ವಲ್ಪ ಸ್ಥಗಿತಗೊಂಡಿತ್ತು. ಪೊಲೀಸರು ಕೂಡಲೇ ವಾಹನಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಮಾದಾಪುರದ ಸುಂದರೇಶ ಅಯ್ಯಂಗಾರ್ ಅವರು ಬೆಂಗಳೂರಿನಲ್ಲಿರುವ ತಮ್ಮ ಮಗನ ಮದುವೆಗೆ ಸಿದ್ದಪಡಿಸಿದ ಸಾಮಾನುಗಳನ್ನು ರಾಮನಾಪುರದ ಕಲ್ಯಾಣ ಮಂಟಪಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಆಗ ಓಮ್ನಿಕಾರಿನ ಸೆಂಟರ್ ಜಾಯಿಂಟ್ ತುಂಡಾಗಿ ಎದುರಿಗೆ ಬರುತ್ತಿದ್ದ ಮ್ಯಾಕ್ಸಿಕ್ಯಾಬ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರ ಗಾಯಗೊಂಡ ಸುಂದರೇಶ ಅಯ್ಯಂಗಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯಲಾಗಿದೆ. ಈ ಬಗ್ಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.