ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಾವಿನಕೆರೆ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ದೇವೇಗೌಡರು

Srinivasa Murthy VN
Updated On : 31 Aug 2013, 10:27 am

ಕ.ಪ್ರ.ವಾರ್ತೆ ಹೊಳೆನರಸೀಪುರ ಆ.31
ಶ್ರಾವಣ ಮಾಸದ ಕೊನೆಯ ಪವಿತ್ರ ಶನಿವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಮ್ಮ ಪುತ್ರ ಶಾಸಕ ಎಚ್.ಡಿ.ರೇವಣ್ಣ ಕುಟುಂಬದೊಂದಿಗೆ ತಾಲೂಕಿನ ಮಾವಿನಕೆರೆ ಬಳಿಯಲ್ಲಿನ ತಮ್ಮ ಆರಾಧ್ಯ ದೈವ ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಹಳ ವರ್ಷಗಳಿಂದಲೂ ದೇವೇಗೌಡರು ತಮ್ಮ ಮನೆ ದೇವರಾದ ಶ್ರೀ ರಂಗನಾಥಸ್ವಾಮಿಗೆ ಶ್ರಾವಣ ಮಾಸದಲ್ಲಿ ಪೂಜೆ ಸಲ್ಲಿಸುತ್ತಾರೆ.
ದೇವೇಗೌಡರ ಮನೆಯ ದೇವರು ಹರದನಹಳ್ಳಿಯ ಶಿವನಾದರೆ, ಗೌಡರ ಹುಟ್ಟೂರಿನ ಸಮೀಪದಲ್ಲಿಯೇ ಇರುವ ಬೆಟ್ಟದ ರಂಗನಾಥಸ್ವಾಮಿ ಇವರ ಆರಾಧ್ಯ ದೈವವಾಗಿದೆ.
ದೇವೇಗೌಡರು ಚಿಕ್ಕವರಿದ್ದಾಗ ಅವರ ತಂದೆಯವರು ಇವರನ್ನು ಬೆನ್ನಿನ ಮೇಲೆ ಕುಳ್ಳಿರಿಸಿಕೊಂಡು ಹೋಗಿ ದೇವರನ್ನು ತೋರಿಸುತ್ತಿದ್ದರಂತೆ. ನಂತರದ ಒಂದು ಕಾಲದಲ್ಲಿ ಇದೇ ಬೆಟ್ಟದ ಸುತ್ತಲೂ ಕುರಿಗಳನ್ನು ಮೇಯಿಸಲು ಬರುತ್ತಿದ್ದ ಗೌಡರು ದೇವರನ್ನು ಕಂಡಿದ್ದ ಕುರಿತಂತೆ ಅವರೇ ಹೇಳುತ್ತಾರೆ. ಪ್ರತಿ ಶ್ರಾವಣ ಮಾಸದಂದು ಇಲ್ಲಿಗೆ ಆಗಮಿಸುವ ದೇವೇಗೌಡರ ಕುಟುಂಬ, ಬೆಟ್ಟದ ರಂಗನಾಥ, ಆಂಜನೇಯ ಹಾಗೂ ಶ್ರೀನಿವಾಸದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸುವುದು ವಾಡಿಕೆ. ತಾಲೂಕಿನ ಹಳೇಕೋಟೆ ಬಳಿಯಲ್ಲಿನ ಈ ಬೆಟ್ಟಕ್ಕೆ ಮೊದಲು ಯಾವುದೇ ಸೌಕರ್ಯವಿಲ್ಲದ ಕಾರಣದಿಂದಾಗಿ ಭಕ್ತಾದಿಗಳು ಬೆಟ್ಟ ಹತ್ತಿಯೇ ದೇವರ ದರ್ಶನ ಪಡೆಯಬೇಕಿತ್ತು.
ಕಳೆದ ಐದಾರು ವರ್ಷಗಳ ಹಿಂದೆ ಶಾಸಕ ಎಚ್.ಡಿ.ರೇವಣ್ಣ ಸಚಿವರಾಗಿದ್ದ ಸಂದರ್ಭದಲ್ಲಿ ಈ ಬೆಟ್ಟಕ್ಕೆ ಲೋಕೋಪಯೋಗಿ ಇಲಾಖೆಯಿಂದ ಸುವ್ಯವಸ್ಥಿತ ರಸ್ತೆ ನಿರ್ಮಿಸಿದರು. ಬೆಟ್ಟದ ಮೇಲೆ ನೂತನ ಹಾಗೂ ಆಕರ್ಷಕ ದೇವಾಲಯವನ್ನೂ ನಿರ್ಮಿಸಿ, ಭಕ್ತರ ಅನುಕೂಲಕ್ಕಾಗಿ ಪ್ರವಾಸಿ ಮಂದಿರ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಬೆಟ್ಟವನ್ನು ಹತ್ತಲು ಭಕ್ತಾಧಿಗಳಿಗಾಗಿ ಮೆಟ್ಟಿಲು ಕೂಡಾ ನಿರ್ಮಿಸಲಾಗಿದೆ.
ಶ್ರಾವಣ ಮಾಸದ ಕೊನೆಯ ಶನಿವಾರವಾದ ಕಾರಣ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಸಾವಿರಾರು ಭಕ್ತಾಧಿಗಳು ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಭಕ್ತಾಧಿಗಳೆಲ್ಲರಿಗೂ ಪ್ರಸಾದ ವಿತರಿಸಲಾಯಿತು. ಬೆಟ್ಟದ ರಂಗನಾಥನಿಗೆ ಪ್ರಧಾನ ಅರ್ಚಕ ಕೇಶವಮೂರ್ತಿ, ಗೋಪಾಲಕೃಷ್ಣ ಹಾಗೂ ಇತರ ಅರ್ಚಕರು ರಂಗನಾಥನನ್ನು ಅತ್ಯಾಕರ್ಷಕವಾಗಿ ಹೂವುಗಳಿಂದ ಅಲಂಕರಿಸಿ ಪಂಚಾಮೃತ ಅಭಿಷೇಕ ಸೇವೆ ಹಾಗೂ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಡಿ.ರೇವಣ್ಣ, ಭವಾನಿರೇವಣ್ಣ, ಪುತ್ರರಾದ ಸೂರಜ್, ಶಾಸಕ ಎಚ್.ಕೆ.ಕುಮಾರಸ್ವಾಮಿ ಮೊದಲಾದವರು ಇದ್ದರು.

ಜಲಾಶಯಗಳ ನೀರಿನ ಮಟ್ಟ
ಹಾಸನ:
ಹೇಮಾವತಿ ಜಲಾಶಯಕ್ಕೆ ಶನಿವಾರ 3422 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ನೀರಿನ ಗರಿಷ್ಠ ಮಟ್ಟ 2922 ಅಡಿ ಇದ್ದು, ಪ್ರಸ್ತುತ ನೀರಿನ ಮಟ್ಟ 2921.62 ಅಡಿ ಇದೆ. ಜಲಾಶಯದಿಂದ  4300 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಪ್ರಸ್ತುತ 36.735 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ಇಂದಿನ ನೀರಿನ ಮಟ್ಟ 3164.398 ಅಡಿ, ಒಳ ಹರಿವು 50 ಕ್ಯುಸೆಕ್, ಹೊರ ಹರಿವು ನಾಲೆಗೆ 175, ಒಟ್ಟು 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: ಇಂದಿನ 3165.25 ಅಡಿ, ಒಳ ಹರಿವು 20 ಕ್ಯುಸೆಕ್, ನಾಲೆಗೆ 115 ಕ್ಯುಸೆಕ್, ಒಟ್ಟು 1.280 ಟಿಎಂಸಿ ನೀರು ಸಂಗ್ರಹವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement