'ಹೋರಾಟಗಾರರ ಹತ್ತಿಕ್ಕುವ ಪಿತೂರಿ'
ಸಕಲೇಶಪುರ: ತಾಲೂಕಿನಲ್ಲಿ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರಿಂದ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ರೈತಸಂಘದ ಮುಖಂಡ ಕ್ಯಾನಹಳ್ಳಿ ರವಿಕುಮಾರ್ ಆಪಾದಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ವ್ಯವಸ್ಥಿತವಾಗಿ ಸಂಘಟನೆಗಳ ಮುಖಂಡರ ಮೇಲೆ ಇಲ್ಲದ ಆರೋಪ ಹೊರಿಸಿ ಠಾಣೆಗಳಲ್ಲಿ ದೂರು ದಾಖಲಿಸಲಾಗುತ್ತಿದೆ. ಇದರಿಂದಾಗಿ ಸಂಘಟನೆಗಳು ದುರ್ಬಲವಾಗುತ್ತಿದ್ದು, ಹೋರಾಟಗಳು ನಶಿಸುತ್ತಿವೆ. ತಾಲೂಕಿನಲ್ಲಿ ಹಲವು ಸಮಸ್ಯೆಗಳಿದ್ದರೂ ಹೋರಾಟಕ್ಕೆ ಇಳಿಯಲು ಸಂಘಟನೆಗಳ ಮುಖಂಡರು ಚಿಂತಿಸುವಂತಾಗಿದೆ. ಇದು ಹೋರಾಟಗಾರರನ್ನು ಹತ್ತಿಕ್ಕಲು ರಾಜಕೀಯ ನಾಯಕರು ಹಾಗೂ ಅಧಿಕಾರಿಗಳ ನಡೆಸುತ್ತಿರುವ ಪಿತೂರಿ ಎಂದು ಹೇಳಿದರು. ರೇಲ್ವೆ ಹಿತರಕ್ಷಣಾ ಸಮಿತಿಯ ನಾರಾಯಣ ಆಳ್ವ, ರೈತ ಮುಖಂಡ ಹೆನ್ನಲಿ ಪಾಪಣ್ಣ, ಮೀಸೆ ಮಂಜಯ್ಯ ಇತರರು ಇದ್ದರು.
ಸಣ್ಣೇಗೌಡರ ನಿಧನಕ್ಕೆ ಸಂತಾಪ
ಹಾಸನ: ಇತ್ತೀಚೆಗೆ ನಿಧನರಾದ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ, ನಾಟಕಕಾರ, ರಂಗ ನಿರ್ದೇಶಕ ಕೆ.ಸಣ್ಣೇಗೌಡರ ನಿಧನಕ್ಕೆ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲಾ ಘಟಕ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಸಣ್ಣೇಗೌಡರು ಹಾಸನ ನಗರದಲ್ಲಿ ಹಾಗೂ ಜಿಲ್ಲೆಯ ಹೊರಗೂ ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ವೈಚಾರಿಕ ಪ್ರಜ್ಞೆ ಬೆಳೆಸುವ ಕಥಾವಸ್ತುಗಳನ್ನು ರಂಗ ರೂಪಕ್ಕಿಳಿಸಿ, ಜಿಲ್ಲೆಯಲ್ಲಿ ರಂಗಕಲೆಯನ್ನು ಉತ್ತುಂಗಕ್ಕೆ ಒಯುವಲ್ಲಿ ನಿರಂತರ ಶ್ರಮಿಸಿದ ಸಾದಕರು ಎಂದು ಜಿಲ್ಲಾ ಕಾರ್ಯದರ್ಶಿ ಎಚ್.ಎ. ಅಹಮ್ಮದ್ ತಿಳಿಸಿದರು. ಜಿಲ್ಲೆಯಲ್ಲಿ ಸಾಕ್ಷರತಾ ಆಂದೋಲನಗಳಿಗೆ ಉತ್ತಮ ಬೆಂಬಲ ನೀಡಿದ್ದ ಅವರು ಸಾಕ್ಷರತಾ ಆಂದೋಲನದ ವಾತಾವರಣ ನಿರ್ಮಾಣ ಚಟುವಟಿಕೆಯಲ್ಲಿ ಬೀದಿ ನಾಟಕಗಳನ್ನು ನಿರ್ದೇಶಿಸಿ ಸಾಕ್ಷರತಾ ಆಂದೋಲನಕ್ಕೆ ಬೆಂಬಲ ನೀಡಿದ್ದ ಅವರು, ಸಾಮಾಜಿಕ ಕಳಕಳಿ ಬಿಂಬಿಸುವ ನಾಟಕ ಕಲೆಯನ್ನು ಜಿಲ್ಲಾದ್ಯಂತ ಬೆಳೆಸಲು ತಮ್ಮನ್ನು ತೊಡಗಿಸಿಕೊಂಡು ಪ್ರಚಾರ ಬಯಸದೆ ಸಾಮಾಜಿಕ ಕೆಲಸ ಮಾಡುವ ಎಲ್ಲ ಸಂಘ ಸಂಸ್ಥೆಗಳಿಗೂ ಅವರು ನಿರಂತರ ಮಾರ್ಗದರ್ಶನ ನೀಡುತ್ತಿದ್ದರು ಎಂದು ಸ್ಮರಿಸಿದ್ದಾರೆ. ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲೆಯಲ್ಲಿ ಜನ್ಮತಾಳಲು ಇವರೊಬ್ಬ ಪಾತ್ರಧಾರಿಯಾಗಿದ್ದರು ಹಾಗೂ ಬಿಜಿವಿಎಸ್ನ ಸಾಂಸ್ಕತಿಕ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುತ್ತಿದ್ದರು. ಅವರ ನಿಧನದಿಂದ ನಾಡಿನ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಮಿತಿ ಕಂಬನಿ ಮಿಡಿದಿದೆ.
ಸೆ.7 ರಂದು ನೌಕರರ ಸಂಘದ ಚುನಾವಣೆ
ಹೊಳೆನರಸೀಪುರ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ಕಾರ್ಯಕಾರಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಅನಿವಾರ್ಯ ಕಾರಣಗಳಿಂದಾಗಿ ತಡೆಹಿಡಿಯಲಾಗಿದ್ದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಕ್ಷೇತ್ರದ ಚುನಾವಣೆಯನ್ನು ಸೆ.7ರಂದು ನಡೆಸುವಂತೆ ರಾಜ್ಯ ಸಂಘವು ತಾಲೂಕು ಶಾಖೆಗೆ ತಿಳಿಸಿದೆ. ತಾಲೂಕು ಕಾರ್ಯಕಾರಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ, ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಕ್ಷೇತ್ರದ ಮತದಾರರ ಪಟ್ಟಿಯನ್ನು ನಿಗದಿತ ಕಾಲಾವಧಿಯೊಳಗೆ ಸಲ್ಲಿಸಲ್ಪಡದಿದ್ದ ಹಿನ್ನೆಲೆಯಲ್ಲಿ ಮೇಲ್ಕಂಡ ಮತಕ್ಷೇತ್ರದ ಚುನಾವಣೆ ತಡೆಹಿಡಿಯಲಾಗಿತ್ತು. ಇನ್ನುಳಿದ ನಾನಾ ಕ್ಷೇತ್ರಗಳಲ್ಲಿನ ಪ್ರತಿನಿಧಿಗಳ ಆಯ್ಕೆ ಅವಿರೋಧವಾಗಿ ನಡೆದ ಹಿನ್ನೆಲೆಯಲ್ಲಿ ತಾಲೂಕು ಶಾಖೆಗೆ ಅಧ್ಯಕ್ಷರನ್ನಾಗಿ ಉಪನ್ಯಾಸಕ ಟಿ.ಎಸ್.ಕುಮಾರಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಮೇಲ್ಕಂಡ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ನಂತರದಲ್ಲಿ ಕೇಂದ್ರ ಸಂಘಕ್ಕೆ ಸಲ್ಲಿಸಲಾಗಿದ್ದು, ಈ ಕಾರಣದಿಂದಾಗಿ ತಾಲೂಕಿನ ಶಿಕ್ಷಕರ ಮತಕ್ಷೇತ್ರದ ಬಾಕಿ ಉಳಿದಿರುವ ಸ್ಥಾನಗಳಿಗೆ ಚುನಾವಣೆಯನ್ನು ಈ ಕೆಳಕಂಡಂತೆ ನಡೆಸಲು ಕೇಂದ್ರ ಸಂಘವು ತಾಲೂಕು ಶಾಖೆಗೆ ಸೂಚಿಸಿದೆ.
'ಭಾರತೀಯ ಸಂಸ್ಕೃತಿ ಬೆಳೆಸುವಲ್ಲಿ ಸ್ತ್ರೀಯರ ಪಾತ್ರ ಮಹತ್ವದ್ದು'
ಹಾಸನ: ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸ್ತ್ರೀಯರ ಅದರಲ್ಲೂ ಯುವತಿಯರ ಪಾತ್ರ ಮಹತ್ವದ್ದಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎನ್.ರಾಜಮ್ಮ ತಿಳಿಸಿದರು. ನಗರದ ವಾಣಿವಿಲಾಸ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತರಲು ಇಲಾಖೆಯು ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ ನಾನಾ ಹಂತಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ಇದರ ಸದುಪಯೋಗಪಡಿಸಿ ಕೊಳ್ಳಬೇಕೆಂದರು.
ಅರ್ಥಶಾಸ್ತ್ರ ಉಪನ್ಯಾಸಕ ಎಂ.ಆರ್.ಶಾಂತೇಗೌಡ ಮಾತನಾಡಿ, ಯುವಜನಾಂಗ ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗಿ ನಮ್ಮ ಮೂಲ ಸಂಸ್ಕೃತಿಯನ್ನು ಮರೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಆರ್.ನಟೇಶ್ ಮಾತನಾಡಿ, ಓದಿನಲ್ಲಿರುವ ಶ್ರದ್ಧೆ ಮತ್ತು ಶಿಸ್ತನ್ನು ಕ್ರೀಡೆಯಲ್ಲಿಯೂ ಅಳವಡಿಸಿಕೊಂಡು ಯಶಸ್ಸು ಸಾಧಿಸಲು ತಿಳಿಸಿದರು. ನಗರಸಭಾ ಸದಸ್ಯ ರಮೇಶ್ಬಾಬು ಇದ್ದರು. ಭವಾನಿ ಪ್ರಾರ್ಥಿಸಿದರು. ಅಶ್ವಿನಿ ಸ್ವಾಗತಿಸಿದರು.
ಹಾಕಿ ಮಾಂತ್ರಿಕ ಧ್ಯಾನ್ಚಂದ್ ಜನ್ಮದಿನಾಚರಣೆ
ಹಾಸನ: ಕ್ರೀಡೆಯ ಬಗೆಗಿನ ಪ್ರೀತಿ ಕೇವಲ ಭಾಷಣದ ಮಾತುಗಳಾಗದೆ, ಅದು ಪ್ರತಿಯೊಬ್ಬನ ಪ್ರವೃತ್ತಿ ಯಾಗಬೇಕು ಎಂದು ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಜಯಣ್ಣ ಹೇಳಿದರು. ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟೀಯ ಕ್ರೀಡಾದಿನ ಹಾಗೂ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ಚಂದ್ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಕ್ರೀಡಾಕ್ಷೇತ್ರದ ಅಮರ ತಾರೆ ಧ್ಯಾನ್ಚಂದ್ ಅವರ ನೆನಪಿನಲ್ಲಿ ಆಚರಿಸುವ ಈ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಾರ್ಥಕವಾಗ ಬೇಕಾದರೆ ವಿದ್ಯಾರ್ಥಿಗಳು ತಮ್ಮನ್ನು ನಿಯತವಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ನುಡಿದರು. ಡಾ.ಡಿ.ಶ್ರೀನಿವಾಸ ಹಾಗೂ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ಪಿ.ಗೋಪಾಲ್ ಮಾತನಾಡಿದರು.