ನಾಡಿಗೆ ಒಡೆಯರ್ ಕೊಡುಗೆ ಅಪಾರ: ದೇವೇಗೌಡ
ಬೇಲೂರು: ಮೈಸೂರು ಒಡೆಯರ್ ಜನ ಸೇವೆ ಮಾಡುವ ಮೂಲಕ ನೀರಾವರಿ, ಕೈಗಾರಿಕೆ ಕಲೆ ಸಂಸ್ಕೃತಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ. ತಾಲೂಕಿನ ಹಗರೆ ಗ್ರಾಮದಲ್ಲಿ ಹೊಲಬಗೆರೆ ಕುಟುಂಬದವರು ನಿರ್ಮಿಸಿರುವ ನೂತನ ಶ್ರೀ ಸತ್ಯನಾರಾಯಣ ಕಲ್ಯಾಣ ಮಂಟಪ ಉದ್ಘಾಟಿಸಿ ಮಾತನಾಡಿದ ಅವರು, ರಾಜ ವಂಶಸ್ಥರು ಯಾವುದೇ ವೈಭೋಗ ನಡೆಸದೆ ಜನಪರ ಕಾರ್ಯ ಮಾಡುವುದರ ಮೂಲಕ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳು ಪಟ್ಟಣಗಳಿಗೆ ಸೆಡ್ಡು ಹೊಡೆಯುವಂತೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿರುವುದು ಸ್ವಾಗತಾರ್ಹ ಎಂದರಲ್ಲದೇ, ಮಾನವರು ಆಸ್ತಿ, ಹಣ, ಅಂತಸ್ತು, ಅಧಿಕಾರಕ್ಕೆ ಪ್ರಾಮುಖ್ಯತೆ ನೀಡದೇ ಇದ್ದಾಗ ಮಾತ್ರ ಅವನಿಗೆ ನೆಮ್ಮದಿ ಸಾಧ್ಯ ಎಂದರು.
ಸಮಾರಂಭದಲ್ಲಿ ಶಾಸಕ ಎಚ್.ಎಸ್. ಪ್ರಕಾಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಜಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ. ಅನಂತ ಸುಬ್ಬಾರಾಯ, ಜಿಲ್ಲಾ ಪಂಚಾಯ್ತಿ ಸದಸ್ಯೆ ಹೇಮವತಿ ಮಂಜುನಾಥ್, ಚಂದ್ರೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎ. ನಾಗರಾಜ್, ಗುತ್ತಿಗೆದಾರ ಎಚ್.ಅರ್. ಚಂದ್ರೇಗೌಡ, ಶ್ರೀನಿವಾಸ್ ಹಾಗೂ ಇತರರು ಇದ್ದರು.