ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೀರಿನ ಯೋಜನೆ ನನಸು

Srinivasa Murthy VN
Updated On : 11 Dec 2013, 9:41 am

ಕ.ಪ್ರ. ವಾರ್ತೆ ಅರಸೀಕೆರೆ  ಡಿ. 11
ತಾಲ್ಲೂಕಿನ ಜಾವಗಲ್ ಹೋಬಳಿಯ 102 ಗ್ರಾಮಗಳು ಸೇರಿದಂತೆ 477 ಗ್ರಾಮಗಳಿಗೆ ಹೇಮಾವತಿ ಮೂಲಕ ಘನ್ನೀಘಡದಿಂದ ಶುದ್ಧ ಕುಡಿಯುವ ನೀರನ್ನು ಓದಗಿಸುವ ರು. 150 ಕೋಟಿ ವೆಚ್ಚದ ಯೋಜನೆಗೆ ಸರ್ಕಾರ ಜಿಂದಾಲ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಗಂಡಸಿ ಹ್ಯಾಂಡ್ ಪೋಸ್ಟ್ ಬಳಿ ಸರ್ವ್ ಕಾರ್ಯಕ್ಕೆ ಹಸಿರು ನಿಶಾನೆ ಈ ಯೋಜನೆಗೆ ಚಾಲನೆ ಹಾಗೂ ಸಾಂಕೇತಿಕವಾಗಿ ಡಿ. 16ರ ಸೋಮವಾರ ಬೆಳಗ್ಗೆ 10 ಗಂಟೆಗೆ ಚಾಲನೆ ನೀಡಲಾಗುವುದೆಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.
ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಈ ಯೋಜನೆಯನ್ನು ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಈಶ್ವರಪ್ಪ ಉದ್ಘಾಟಿಸಿದ್ದು, ಈ ಯೋಜನೆಯಿಂದ ಜಾವಗಲ್ ಹೋಬಳಿಯ ಯಗಚಿ ಜಲಾಶಯದಿಂದ ನೀರು ದೊರೆಯದ 102 ಗ್ರಾಮಗಳೂ ಸೇರಿದಂತೆ ಅರಸೀಕೆರೆ ಕ್ಷೇತ್ರದ 375 ಗ್ರಾಮಗಳಿಗೆ ಒಟ್ಟು 477 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
ಕ್ಷಮಿಸಲಾರರು: ತಾಲ್ಲೂಕಿನಲ್ಲಿ ಪ್ರಕೃತಿ ವೈಪರೀತ್ಯ, ಸತತ ಮಳೆ ಅಭಾವದಿಂದ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು ಇನ್ನೈದು ವರ್ಷ ಇದೇ ಪರಿಸ್ಥಿತಿ ಮುಂದುವರಿದರೆ ಇಡೀ ತಾಲ್ಲೂಕಿನ ಜನತೆ ನೀರಿಗಾಗಿ ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದ್ದು, ಇದನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹೋರಾಟಕ್ಕೆ ಸಿದ್ಧರಾಗುವ ಅಗತ್ಯವಿದೆ. ಆದ್ದರಿಂದ ಜಾತಿಭೇದ, ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ಗುರಿ ಮುಟ್ಟುವ ತನಕ ಹೋರಾಟ ಮಾಡುವ ಅವಶ್ಯಕತೆಯಿದ್ದು ಇಲ್ಲದಿದ್ದರೆ ಕುಡಿಯುವ ನೀರಿನ ಪರಿಸ್ಥಿತಿ ಅಧೋಗತಿ ತಲುಪಲಿದ್ದು ಮುಂದಿನ ಪೀಳಿಗೆ ನಮ್ಮನ್ನು ಖಂಡಿತ ಕ್ಷಮಿಸಲಾರರು ಎಂದು ತಿಳಿಸಿದರು.
ಒತ್ತಾಯ: ಸತತ ಬರಗಾಲ, ಮಳೆ ಅಭಾವದಿಂದ ಸಂಕಷ್ಟಕ್ಕೀಡಾಗಿರುವ ರೈತರ ಹಿತ ಕಾಯಲು  ತಾಲ್ಲೂಕಿನ ಕೆರೆ ಕೆರೆಗಳಿಗೆ ಚಾನಲ್ ಮೂಲಕ ನೀರು ಹರಿಸುವ ಅಗತ್ಯತೆ ಇದ್ದು ಇದಕ್ಕೆ ಎರಡೂವರೆ ಟಿ.ಎಂ.ಸಿ. ನೀರು ಅಗತ್ಯವಿದ್ದು ಅದನ್ನು ಹೇಮಾವತಿ, ಕೃಷ್ಣಾ ಅಥವಾ ಪರಮಶಿವಯ್ಯ ವರದಿಯಂತೆ ನೇತ್ರಾವತಿ ತಿರುವು ಯೋಜನೆಯಲ್ಲಿ ಇಡೀ ಅರಸೀಕೆರೆ ತಾಲ್ಲೂಕು ಸಂಪೂರ್ಣ ನೀರಾವರಿಯಾಗಲಿದ್ದು, ಆ ಮೂಲಕವಾದರೂ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.
ಆಗ್ರಹ: ರಾಜ್ಯದಲ್ಲಿ ಕಾವೇರಿ, ಕೃಷ್ಣ ಬೇಸನ್ ಎಂದು ಬೇರ್ಪಡಿಸಿ ತಾಲ್ಲೂಕಿಗೆ ವಂಚನೆ ಮಾಡಲಾಗಿದ್ದು ಇಂತಹ ಪರಿಸ್ಥಿತಿಯಲ್ಲಿ 192 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟ ನಂತರ ಸಮುದ್ರ ಸೇರಲಿರುವ ನೀರನ್ನು ಬರಪೀಡಿತ ತಾಲ್ಲೂಕಾದ ಅರಸೀಕೆರೆ, ತಿಪಟೂರು, ತುರುವೆಕೆರೆ, ಚಿ.ನಾ.ಹಳ್ಳಿಗೆ ಚಾನಲಲ್ಮೂಲಕ ನೀರು ಕೊಡಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಎಚ್ಚರಿಕೆ: ಈ ನಿಟ್ಟಿನಲ್ಲಿ ಬರಪೀಡಿತ ತಾಲ್ಲೂಕುಗಳ ಐವರು ಶಾಸಕರನ್ನು ಭೇಟಿ ಮಾಡಿ ಚರ್ಚೆ ಮಾಡಲಾಗಿದ್ದು, 5 ತಾಲ್ಲೂಕಿನ ಜನರು ಹಾಗೂ ಜನಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಇದಕ್ಕೆ ಸ್ಪಂದಿಸದಿದ್ದಲ್ಲಿ ಸದನದ ಒಳಗೆ ಹೋರಾಟ ನಡೆಸಲಾಗುವುದು. ನಂತರ ಸದನದ ಒಳಗೆ ಹಾಗೂ ಹೊರಗೆ ಪಕ್ಷಬೇಧ ಮರೆತು ಜನಸಾಮಾನ್ಯರೊಡನೆ ನಮ್ಮ ಹಕ್ಕಿಗಾಗಿ ಗುರಿ ಮುಟ್ಟುವ ತನಕ ಹೋರಾಟ ಮುಂದುವರೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬಿಳಿಚೌಡಯ್ಯ, ಸದಸ್ಯ ಹುಚ್ಚೇಗೌಡ, ತಾಲೂಕು ಪಂಚಾಯ್ತಿ ಅಧ್ಯಕ್ಷ ಎಚ್.ಟಿ. ಶಿವಮೂರ್ತಿ, ಸದಸ್ಯ ಲಕ್ಷ್ಮಣ, ಜೆಡಿಎಸ್ ಮುಖಂಡ ಗಂಗಾಧರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement